ಸಮಾನ ಶಿಕ್ಷಣ ಪದ್ಧತಿ ಜಾರಿಯಾಗಲಿ: ಹಿರಿಯ ಸಾಹಿತಿ ಚನ್ನೇಗೌಡ
ಹಾಸನ: 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

ಹಾಸನ, ಫೆ.27: ಶಿಕ್ಷಣದ ನೀತಿ ಬದಲಾಯಿಸಿಕೊಂಡು ಬಡವ, ಶ್ರೀಮಂತರ ಮಕ್ಕಳಿಗೆಲ್ಲ ಸಮಾನ ಶಿಕ್ಷಣ ಪದ್ಧತಿ ಜಾರಿಯಾಗಿ, ಸಮಭಾವದ ಶಿಕ್ಷಣ ಕಲಿಯುವಂತಾಗಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕು ಎಂದು ಹಿರಿಯ ಸಾಹಿತಿ ಹಾಗೂ ಸಮ್ಮೇಳನಾಧ್ಯಕ್ಷ ಎನ್.ಎಲ್.ಚನ್ನೇಗೌಡ ಒತ್ತಾಯಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆಗಳನ್ನೇ ಮುಚ್ಚಿಕೊಂಡು ಬರುವ ಈ ಸ್ಥಿತಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಎಲ್ಲಿ ತೆರೆಯುತ್ತಾರೆ? ಪ್ರತಿಹಳ್ಳಿಗಳಲ್ಲೂ ಪೂರ್ವ ಪ್ರಾಥಮಿಕ ಶಾಲೆಯನ್ನು ತೆರೆದು, ಪ್ರಾಥಮಿಕ ಶಾಲೆಯಲ್ಲಿ ಒಂದನೆ ತರಗತಿಯಿಂದ ಐದನೇ ತರಗತಿಯವರೆಗೂ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಿ ಎಂದು ಹೇಳಿದರು.
ಕನ್ನಡಿಗರಾದ ನಾವು ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಭೌಗೋಳಿಕವಾಗಿ ಒಂದಾಗಿದ್ದೇವೆ ಹೊರತು ಭೌತಿಕವಾಗಿ, ಭಾವನಾತ್ಮಕವಾಗಿ ಒಂದಾಗಲೇ ಇಲ್ಲ. ಈಗಲೂ ಬೆಳಗಾವಿಯಲ್ಲಿ ಕರ್ನಾಟಕದ ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿದೆ ಎಂದ ಅವರು, ಅಲ್ಲಿಯ ಜನಪ್ರತಿನಿಧಿಗಳು ಇಬ್ಬಾಗದ ಕೂಗು ಹಾಕುತ್ತಿರುವುದನ್ನು ಖಂಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಸಾಹಿತ್ಯ ಪರಿಷತ್ತು ಜನ್ಮ ತಾಳಿದ್ದೇ ಪ್ರಭುತ್ವದ ಆವರಣಗಳೊಳಗೆ. 1918ರಲ್ಲಿ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ ಅದಕ್ಕೆ ಒತ್ತಾಸೆಯಾಗಿ ನಿಂತಿದ್ದವರು ಸರ್.ಎಂ.ವಿಶ್ವೇಶ್ವರಯ್ಯನವರು. ಅವರ ಕಾಲದಲ್ಲಿ ಮೈಸೂರಿನೊಳಗೆ ಬಹಳಷ್ಟು ಜನಪರ ಕಾರ್ಯಗಳು ನಡೆದವು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ, ಕೃತಿ ಬಿಡುಗಡೆ ಮಾಡಲಾಯಿತು. ಚಾಣಕ್ಯ ಪ್ರಕಾಶನಕ್ಕೆ ಚಾಲನೆ ನೀಡಿದರು. ಹಚ್ಚೇವು ಕನ್ನಡದ ದೀಪ ಹಾಡಿಗೆ ಗಿನ್ನಿಸ್ ದಾಖಲೆಯ ಸ್ವಾತಿ ಭಾರದ್ವಾಜ್ ಭರತನಾಟ್ಯವನ್ನು ಪ್ರದರ್ಶಿಸಿದರು. ಇದೆ ವೇಳೆ ಪರಿಷತ್ತು ಧ್ವಜವನ್ನು ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷ ರವಿನಾಕಲಗೂಡು, ಮಾಜಿ ಅಧ್ಯಕ್ಷ ಎಚ್.ಬಿ. ಮದನ್‌ಗೌಡ, ರಾಜ್ಯ ಸಣ್ಣ ಪತ್ರಿಕೆಗಳ ಒಕ್ಕೂಟ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ್, ಕಿರುತೆರೆ ನಾಯಕ ಭರತ್, ಗೌರವ ಕಾರ್ಯದರ್ಶಿ ಕಲ್ಲಹಳ್ಳಿ ಹರೀಶ್, 16ನೇ ಕಸಾಪ ಸಮ್ಮೇಳನಾಧ್ಯಕ್ಷ ಚಂದ್ರಕಾಂತ ಪಡೆಸೂರು, ಎವಿಕೆ ಕಾಲೇಜು ಕನ್ನಡ ಉಪನ್ಯಾಸಕ ಸೀ.ಚ. ಯತೀಶ್ವರ್, ಕಲಾವಿದ ರಾಮಣ್ಣ, ಹಾಸನ ಜೆಲ್ಲೆಯ ಎಲ್ಲ ತಾಲೂಕಿನ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷಕ ವೃಂದದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಸಾಪ ಪುಸ್ತಕ ಪ್ರದರ್ಶನ, ಮಾರಾಟ
17ನೇ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮ್ಮೇಳನದ ಅಂಗವಾಗಿ ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಪುಸ್ತಕ ಪ್ರದರ್ಶನ ಹಾಗೂ ವ್ಯಾಪಾರವನ್ನು ಏರ್ಪಡಿಸಲಾಗಿತ್ತು. ಸಾಹಿತ್ಯಾಸಕ್ತರು ಸೇರಿದಂತೆ ಇತರರು ವಿವಿಧ ರೀತಿಯ ಪುಸ್ತಕವನ್ನು ಕೊಂಡುಕೊಳ್ಳಲು ಮುಗಿ ಬಿದ್ದಿದ್ದರು.
ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗಬೇಕು. ಬ್ಯಾಂಕುಗಳಲ್ಲಿ ಹೊರ ರಾಜ್ಯದ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭಾಷೆಯ ಸಮಸ್ಯೆ ಇರುವುದರಿಂದ ಗ್ರಾಹಕರಿಗೂ ಸಮಸ್ಯೆಯಾಗುತ್ತಿವೆ.
-ಎನ್.ಎಲ್.ಚನ್ನೇಗೌಡ, ಹಿರಿಯ ಸಾಹಿತಿ, ಸಮ್ಮೇಳನಾಧ್ಯಕ್ಷ
ಅದ್ದೂರಿ ಮೆರವಣಿಗೆ
ಕಸಾಪ 17ನೇ ಜಿಲ್ಲಾ ಸಮ್ಮೇಳನದ ಮೆರವಣಿಗೆಯಲ್ಲಿ ಬೃಹತ್ ರಥ ಭಾಗವಹಿಸಿತ್ತು. ಇನ್ನುಳಿದಂತೆ ಕೋಲಾಟ, ಜಾನಪದ ಕುಣಿತ, ಕೀಲು ಕುದುರೆ, ಕಳಸ ಹೊತ್ತ ಯುವತಿಯರು ಮತ್ತು ಮಹಿಳೆಯರು, ಮಕ್ಕಳಿಂದ ನೃತ್ಯ, ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್, ಭಾರತ್ ಸೇವಾದಳ ಸೇರಿದಂತೆ ವಿವಿಧ ಕಲಾತಂಡಗಳು ಮೆರುಗು ನೀಡಿತು. ಆದಿಚುಂಚನಗಿರಿ ಪ್ರೌಢಶಾಲೆಯ ಆವರಣದಿಂದ ವಿದ್ಯಾನಗರದ ಬುದ್ಧ ಮಾರ್ಗವಾಗಿ, ವಿವಿಧ ರಸ್ತೆ ಮೂಲಕ ಹಾಸನಾಂಬ ಕಲಾಕ್ಷೇತ್ರಕ್ಕೆ ಮೆರವಣಿಗೆ ಸಾಗಿತು.











