ಉಗ್ರ ಮಸೂದ್ ಅಝರ್ ಮೇಲೆ ನಿರ್ಬಂಧ ಹೇರಲು ವಿಶ್ವಸಂಸ್ಥೆ ಕದ ತಟ್ಟಿದ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್
ಜಿನೇವಾ,ಫೆ.28 : ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ತನ್ನ ದೇಶದಲ್ಲಿ ಆಶ್ರಯ ಪಡೆದಿರುವ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಪಾಕಿಸ್ತಾನ ಆಸಕ್ತಿ ತೋರಿಸದಿರುವ ಹಿನ್ನೆಲೆಯಲ್ಲಿ ಅಮೆರಿಕಾ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ಹೊಸ ಅಪೀಲು ಸಲ್ಲಿಸಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕು ಎಂದು ಆಗ್ರಹಿಸಿವೆ.
ಈ ಅಪೀಲನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದ್ದೇ ಆದಲ್ಲಿ ಮಸೂದ್ ಅಝರ್ ಮೇಲೆ ಜಾಗತಿಕ ಪ್ರವಾಸ ನಿಷೇಧ, ಆತನಿಗೆ ಸೇರಿದ ಸೊತ್ತುಗಳ ಜಪ್ತಿ ಮತ್ತು ಶಸ್ತ್ರಾಸ್ತ್ರ ನಿಷೇಧ ಕ್ರಮಕ್ಕೆ ಆತ ಒಳಗಾಗಬೇಕಾಗುತ್ತದೆಯಲ್ಲದೆ ಆತ ವಿಶ್ವ ಸಂಸ್ಥೆಯಿಂದ ಘೋಷಿತನಾದ ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲ್ಪಟುತ್ತಾನೆ.
ರಷ್ಯಾ ಕೂಡ ಈ ಹಿಂದೆ ಅಝರ್ ಮೇಲಿನ ನಿಷೇಧಕ್ಕೆ ಬೆಂಬಲ ಸೂಚಿಸಿದ್ದರಿಂದ ಅದು ಈ ಪ್ರಸ್ತಾವನೆಗೆ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆಯಿದೆ. ಆದರೆ ಈ ಹಿಂದೆ ಇಂತಹ ಪ್ರಸ್ತಾವನೆಗಳಿಗೆ ಚೀನಾ ಅಡ್ಡಿಯುಂಟು ಮಾಡಿರುವುದರಿಂದ ಈಗ ಎಲ್ಲರ ಕಣ್ಣು ಚೀನಾದ ಮೇಲಿದೆ.
ಮೂರು ಸದಸ್ಯ ರಾಷ್ಟ್ರಗಳು ಸಲ್ಲಿಸಿರುವ ಈ ಪ್ರಸ್ತಾವನೆ ಪರಿಶೀಲಿಸಲು ವಿಶ್ವ ಸಂಸ್ಥೆಯ ಸಮಿತಿಗೆ 10 ದಿನಗಳ ಕಾಲಾವಕಾಶ ದೊರಕಲಿದೆ.
ಅಝರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಂತೆ ಕೋರಿ ಭಾರತ ಮೊದಲ ಬಾರಿ 2009ರಲ್ಲಿ ವಿಶ್ವ ಸಂಸ್ಥೆಯ ಕದ ತಟ್ಟಿತ್ತು. ನಂತರ 2016ರಲ್ಲಿ ಅದು ಅಮೆರಿಕಾ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಜತೆ ಸೇರಿ ಮನವಿ ಸಲ್ಲಿಸಿತ್ತು. 2017ರಲ್ಲಿ ಅಮೆರಿಕಾ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಮತ್ತೆ ಮನವಿ ಸಲ್ಲಿಸಿದ್ದವು. ಆದರೆ ವೀಟೋ ಅಧಿಕಾರ ಹೊಂದಿದ ಚೀನಾ ಪ್ರತಿ ಬಾರಿಯೂ ಈ ಅಪೀಲುಗಳಿಗೆ ಅಡ್ಡಿಯುಂಟು ಮಾಡಿತ್ತು.