ವಾಯುದಾಳಿ ಕುರಿತ ಹೇಳಿಕೆಗಾಗಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ವಿ.ಕೆ.ಸಿಂಗ್

ಹೊಸದಿಲ್ಲಿ,ಫೆ.28: ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರದ ಮೇಲೆ ಭಾರತೀಯ ವಾಯುಪಡೆಯ ದಾಳಿಯು ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ದೇಶದಲ್ಲಿ ‘ಮೋದಿ ಪರ’ ಅಲೆಯನ್ನು ಸೃಷ್ಟಿಸಿದೆ ಎಂಬ ಹೇಳಿಕೆಗಾಗಿ ಪಕ್ಷದ ಸಹೋದ್ಯೋಗಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಅವರು ಗುರುವಾರ ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ನಾವು ಒಂದು ದೇಶವಾಗಿದ್ದೇವೆ ಹಾಗೂ ನಮ್ಮ ದೇಶ ಮತ್ತು ನಮ್ಮ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಲು ನಮ್ಮ ಸರಕಾರವು ಕ್ರಮ ಕೈಗೊಂಡಿದೆಯೇ ಹೊರತು ಕೆಲವು ಹೆಚ್ಚುವರಿ ಸ್ಥಾನಗಳಿಗಾಗಿ ಅಲ್ಲ ಎಂದು ಸಿಂಗ್ ಟ್ವೀಟಿಸಿದ್ದಾರೆ.
ವಾಯುದಾಳಿಯು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 22ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ನೆರವಾಗಲಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷರೂ ಆಗಿರುವ ಯಡಿಯೂರಪ್ಪ ಬುಧವಾರ ಹೇಳಿದ್ದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ಮಾಡಿದ್ದ ಭಾಷಣವೊಂದನ್ನೂ ಸಿಂಗ್ ಉಲ್ಲೇಖಿಸಿದ್ದಾರೆ.‘ರಾಜಕೀಯದ ಆಟವು ನಡೆಯುತ್ತಲೇ ಇರುತ್ತದೆ. ಸರಕಾರವು ಬರುತ್ತದೆ ಮತ್ತು ಹೋಗುತ್ತದೆ. ಪಕ್ಷಗಳು ರೂಪುಗೊಳ್ಳುತ್ತವೆ ಮತ್ತು ಹಾನಿಯನ್ನೂ ಅನುಭವಿಸುತ್ತವೆ. ಆದರೆ ದೇಶವು ಉಳಿಯಬೇಕು,ಪ್ರಜಾಪ್ರಭುತ್ವವು ಉಳಿಯಬೇಕು’ ಎಂದು ವಾಜಪೇಯಿ ಹೇಳಿದ್ದರು.
ಗುರುವಾರ ತನ್ನ ಹೇಳಿಕೆಯ ಕುರಿತು ಸಮಜಾಯಿಷಿ ನೀಡಿರುವ ಯಡಿಯೂರಪ್ಪ,ಅದನ್ನು ಸಂದರ್ಭಕ್ಕೆ ಹೊರತಾಗಿ ವರದಿ ಮಾಡಲಾಗಿದೆ. ಇದೇ ಹೇಳಿಕೆಯನ್ನು ತಾನು ಹಿಂದೆಯೂ ಹಲವಾರು ಬಾರಿ ನೀಡಿದ್ದೇನೆ. ಮೋದಿಯವರ ಸಮರ್ಥ ನಾಯಕತ್ವದಡಿ ಬಿಜೆಪಿಯು ಕರ್ನಾಟಕದಲ್ಲಿ ಕನಿಷ್ಠ 22 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ತಾನು ಹೇಳಿರುವುದು ಇದೇ ಮೊದಲ ಬಾರಿಯಲ್ಲ ಎಂದು ತಿಳಿಸಿದರು.







