ಮಾ.1ರಿಂದ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧ

ಮಂಗಳೂರು, ಫೆ. 28: ರಾ.ಹೆ.169ರ ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ತಿಗೊಳಿಸಲಿರುವುದರಿಂದ ಮಾ.1ರಿಂದ 31ರವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರಾ.ಹೆ. 169 ಎ.14ನೆ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿಯ 14ನೆ, 7ನೆ ತಿರುವುಗಳಲ್ಲಿ ಕಳೆದ ಮಳೆಗಾಲದಲ್ಲಿ ಉಂಟಾದ ರಸ್ತೆ ಹಾನಿಯನ್ನು ಶಾಶ್ವತವಾಗಿ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಜರುಗಿಸಲಾಗಿದೆ.
ಅದರಂತೆ ಲಘು ವಾಹನಗಳಾದ ಸಾಮಾನ್ಯ ಬಸ್‌ಗಳು, ಜೀಪು, ವ್ಯಾನ್, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಮಾಳಾಘಾಟ್, ಕಾರ್ಕಳ-ಉಡುಪಿ (ರಾ.ಹೆ.169) ರಸ್ತೆಯಾಗಿ, ಭಾರೀ ವಾಹನಗಳಾದ ರಾಜಹಂಸ, ಐರಾವತ ಬಸ್‌ಗಳು, ಖಾಸಗಿ ಲಕ್ಸುರಿ ಬಸ್‌ಗಳು, ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೊ, ಕಂಟೈನರ್ಸ್ ವಾಹನಗಳು ತೀರ್ಥಹಳ್ಳಿ, ಮಾಸ್ತಿಕಟ್ಟೆ, ಹೊಸಂಗಡಿ, ಸಿದ್ದಾಪುರ, ಕುಂದಾಪುರ-ಉಡುಪಿ (ರಾಜ್ಯ ಹೆದ್ದಾರಿ 52)ರಸ್ತೆಯಾಗಿ ಸಂಚರಿಸಬಹುದಾಗಿದೆ.
ಈ ಬದಲಿ ಮಾರ್ಗವಲ್ಲದೆ ಆಗುಂಬೆಯಲ್ಲಿರುವ ಸರಕಾರಿ ಶಾಲೆ, ಎಸ್‌ವಿಎಸ್ ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳಬೇಕಾಗಿರುವುದರಿಂದ ಮಿನಿ ಬಸ್‌ಗಳನ್ನು ತೀರ್ಥಹಳ್ಳಿ, ಆಗುಂಬೆ, ಬಿದರಗೋಡು, ಶೃಂಗೇರಿ ಮಾರ್ಗವಾಗಿ ಮತ್ತು ಸಾಮಾನ್ಯ ಬಸ್‌ಗಳನ್ನು ತೀರ್ಥಹಳ್ಳಿ, ಕಲ್ಮನೆ, ಹೆಗ್ಗೋಡು, ರಾಮಕೃಷ್ಣಾಪುರ, ಕಮ್ಮರಡಿ, ಶೃಂಗೇರಿ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.





