ಟ್ರೋಲ್‌ಗಳಿಗೆ ಎದೆಗುಂದದ ಮೃತ ಸಿಆರ್‌ಪಿಎಫ್ ಯೋಧನ ಪತ್ನಿಯಿಂದ ಶಾಂತಿಗಾಗಿ ಮನವಿ

ಕೊಲ್ಕತಾ,ಫೆ.28: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಶಾಂತಿಗಾಗಿ ಮನವಿ ಮಾಡಿದ ಕಾರಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗಳಿಗೆ ಎದೆಗುಂದದ ಮೃತ ಸಿಆರ್‌ಪಿಎಫ್ ಯೋಧನ ಪತ್ನಿ ಉಭಯ ರಾಷ್ಟ್ರಗಳು ಮಾತುಕತೆ ನಡೆಸಬೇಕು ಎಂಬ ತನ್ನ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರವರಿ 14ರಂದು ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟ 40 ಸಿಆರ್‌ಪಿಎಫ್ ಯೋಧರ ಪೈಕಿ ಮಿತಾ ಸಂತ್ರರ ಪತಿ ಬಬ್ಲು ಸಂತ್ರ ಕೂಡಾ ಒಬ್ಬರಾಗಿದ್ದಾರೆ. ತನ್ನ ಯುದ್ಧ ವಿರೋಧಿ ನಿಲುವಿಗೆ ಸಾಮಾಜಿಕ ಮಾಧ್ಯಮದಲ್ಲಿ ಬರುತ್ತಿರುವ ಟೀಕೆಗಳ ಬಗ್ಗೆ ತಾನು ಚಿಂತಿತಳಾಗಿಲ್ಲ ಎಂದು ತಿಳಿಸಿರುವ ಮಿತಾ, ಬುಧವಾರ ಪಾಕಿಸ್ತಾನ ಬಂಧಿಸಿರುವ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಯುದ್ಧದಿಂದ ಇನ್ನಷ್ಟು ಜೀವಗಳು ಬಲಿಯಾಗುತ್ತವೆ. ಹಾಗಾಗಿ ಮಾತುಕತೆಗೂ ನಾವು ಒಂದು ಅವಕಾಶ ನೀಡಬೇಕು ಎಂದು ಮಿತಾ ತಿಳಿಸಿದ್ದಾರೆ. ಆತ್ಮಹತ್ಯಾ ದಾಳಿಯಲ್ಲಿ ತನ್ನ ಪತಿ ಸಾವನ್ನಪ್ಪಿದ್ದರೂ ಮತ್ತು ಈ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಬೇಕೆಂಬ ಆಗ್ರಹಗಳು ಕೇಳಿಬಂದರೂ ಮಿತಾ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ಯುದ್ಧವು ಎರಡೂ ದೇಶಗಳ ಇನ್ನಷ್ಟು ಜೀವಗಳನ್ನು ಬಲಿಪಡೆಯುತ್ತದೆ. ಇದರಿಂದ ಇನ್ನಷ್ಟು ಮಹಿಳೆಯರು ವಿಧವೆಯರಾಗುತ್ತಾರೆ, ಹೆತ್ತವರು ಮಕ್ಕಳನ್ನು ಕಳೆದುಕೊಳ್ಳುತ್ತಾರೆ ಮತ್ತು ಮಕ್ಕಳು ಅನಾಥರಾಗುತ್ತಾರೆ ಎಂದು ಮಿತಾ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಟೀಕೆಗಳಿಂದ ನನಗೇನೂ ಬೇಸರವಾಗಿಲ್ಲ. ಫೆಬ್ರವರಿ 14ರ ನಂತರ ನನ್ನನ್ನು ಯಾವ ವಿಷಯಗಳೂ ಬಾಧಿಸುವುದಿಲ್ಲ. ಯಾರು ಏನು ಬೇಕಾದರೂ ಹೇಳಬಹುದು. ನನಗೆ ಚಿಂತೆಯಿಲ್ಲ ಎಂದು ಮಿತಾ ತಿಳಿಸಿದ್ದಾರೆ. ನನ್ನನ್ನು ಟೀಕಿಸುವ ಜನರ ಮನೆಯ ಯಾರಾದರೂ ಒಬ್ಬ ಸದಸ್ಯ ಸಶಸ್ತ್ರಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಯೇ. ಸಶಸ್ತ್ರಪಡೆಗಳ ಯೋಧರು ಯುದ್ಧದಲ್ಲಿ ಪ್ರಾಣತ್ಯಾಗ ಮಾಡುವುದು ಸ್ವಾಭಾವಿಕವಾಗಿರಬಹುದು. ಆದರೆ ಅವರ ಸುರಕ್ಷತೆಯನ್ನು ಭಾರತ ಸರಕಾರ ಖಾತರಿಪಡಿಸಿಕೊಳ್ಳಬೇಕು ಎಂದು ಮಿತಾ ಅಭಿಪ್ರಾಯಿಸಿದ್ದಾರೆ. ಸ್ನಾತಕೋತರ ಪದವೀಧರೆಯಾಗಿರುವ ಮಿತಾ ಅವರು ಸದ್ಯ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದು ಸಿಆರ್‌ಪಿಎಫ್‌ನಲ್ಲಿ ಉದ್ಯೋಗಾವಕಾಶ ದೊರಕಿದೆ. ಆದರೆ ಈ ಬಗ್ಗೆ ಸದ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.







