ಮಾ. 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ; ಉಡುಪಿ ಜಿಲ್ಲೆ ಸಜ್ಜು
ಉಡುಪಿ, ಫೆ. 28: ವಿದ್ಯಾರ್ಥಿಯೊಬ್ಬನ ಜೀವನದ ಮಹತ್ವದ ಕಾಲಘಟ್ಟ ವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ. 1ರಿಂದ 18ರವರೆಗೆ ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಬ್ರಹ್ಮಣ್ಯ ಜೋಶಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ 27 ಕೇಂದ್ರಗಳಲ್ಲಿ ಒಟ್ಟು 15,410 ಮಂದಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ. 2017ರಲ್ಲಿ 16,428ಮಂದಿ ಹಾಗೂ 2018ರಲ್ಲಿ 16,074 ಮಂದಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು.
ಸಾಮಾನ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ಬರೆಯುವ ಬಾಲಕರಿಗಿಂತ ಬಾಲಕಿಯರ ಸಂಖ್ಯೆ ಅಧಿಕವಾಗಿರುತ್ತಿದ್ದು, ಈ ಬಾರಿ ಬಾಲಕರ ಸಂಖ್ಯೆಯೇ ಅಧಿಕವಿದೆ. ಈ ಬಾರಿ 7940 ಮಂದಿ ಬಾಲಕರು ಪರೀಕ್ಷೆ ಬರೆದರೆ, ಪರೀಕ್ಷೆ ಬರೆಯುವ ಬಾಲಕಿಯರ ಸಂಖ್ಯೆ 7470 ಮಾತ್ರ. ಕಳೆದ ವರ್ಷ ಜಿಲ್ಲೆಯಲ್ಲಿ 7817 ಬಾಲಕರು, 8257 ಬಾಲಕಿಯರು ಪರೀಕ್ಷೆ ಬರೆದಿದ್ದರು.
ಈ ಬಾರಿ ಕಾಮರ್ಸ್ ವಿಭಾಗದಲ್ಲಿ -8457- ಅತ್ಯಧಿಕ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ವಿಜ್ಞಾನ ವಿಭಾಗದಲ್ಲಿ 5218 ಹಾಗೂ ಆರ್ಟ್ಸ್ ವಿಭಾಗದಲ್ಲಿ 1735 ಮಂದಿ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಸುಬ್ರಹ್ಮಣ್ಯ ಜೋಶಿ ತಿಳಿಸಿದರು.
ಈ ಬಾರಿ ಪರೀಕ್ಷೆ ವೇಳೆ ಯಾವುದೇ ರೀತಿಯಲ್ಲಿ ಅಕ್ರಮ, ಅವ್ಯವಹಾರಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಇದಕ್ಕಾಗಿ ಎಲ್ಲಾ 27 ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿಯನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಪ್ರತಿಯೊಂದು ಕೋಣೆಗೂ ಸಿಸಿಟಿವಿ ಅಳವಡಿಸದಿದ್ದರೂ, ಪ್ರಮುಖ ಪ್ರಕ್ರಿಯೆ ನಡೆಯುವ ಸ್ಥಳಗಳಲ್ಲಿ ಇವುಗಳನ್ನು ಅಳವಡಿಸಲಾಗಿದೆ.
ಪ್ರತಿಯೊಂದು ಕೇಂದ್ರಗಳಲ್ಲಿ ಬಯೋಮೆಟ್ರಿಕ್, ಪ್ರಶ್ನೆ ಪತ್ರಿಕೆ ಇರಿಸುವ ಟ್ರಜರಿಯಲ್ಲಿ ಬಾರ್‌ಕೋಡ್ ರೀಡರ್‌ಗಳನ್ನು ಅಳವಡಿಸಲಾಗಿದೆ.ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು 8 ರೂಟ್ ತಂಡಗಳನ್ನು ರಚಿಸಲಾಗಿದೆ. ಟ್ರಜರಿಯಿಂದ ಪ್ರಶ್ನೆಪತ್ರಿಕೆಗಳನ್ನು ತರಲು ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಅಳವಡಿಸಿದ ವಾಹನದಲ್ಲೇ ಈ ತಂಡಗಳು ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಿವೆ ಎಂದು ಅವರು ವಿವರಿಸಿದರು.
ಪ್ರತೀ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಬೇರೆ ಜಿಲ್ಲೆಗಳ 54 ಮಂದಿ ಸ್ಕ್ವಾಡ್ ಸದಸ್ಯರನ್ನು ನೇಮಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಕ್ಕೆ ಆಯಾ ಕಾಲೇಜಿನ ಪ್ರಾಂಶುಪಾಲರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿದೆ. ಇದಲ್ಲದೆ ಪ್ರತೀ ಪರೀಕ್ಷಾ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಲು ಜಾಗೃತ ದಳ ರಚಿಸಲಾಗಿದೆ ಎಂದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಈ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ ನಡೆಸಲಿದೆ.
ಈಗಾಗಲೇ ಪರೀಕ್ಷೆಗೆ ಸಂಬಂಧಿಸಿದ ಲೇಖನ ಸಾಮಾಗ್ರಿಗಳು ಜಿಲ್ಲೆಗೆ ತಲುಪಿವೆ. ಪ್ರಶ್ನೆಪತ್ರಿಕೆಗಳನ್ನು ಸಶಸ್ತ್ರ ಪೊಲೀಸ್‌ರ ಬಿಗುವಾದ ಭದ್ರತೆಯಲ್ಲಿ ಜಿಲ್ಲಾ ಖಜಾನೆಯ ಸ್ಟ್ರಾಂಗ್‌ರೂಂನಲ್ಲಿ ಇಡಲಾಗಿದೆ.ಪ್ರಶ್ನೆ ಪತ್ರಿಕೆಗಳನ್ನು ಆಯಾ ಪರೀಕ್ಷಾ ದಿನದಂದೇ ಬೆಳಗ್ಗೆ ಬಿಗುಭದ್ರತೆಯಲ್ಲಿ ತಲುಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ಬಾರಿಯಿಂದ ವಿದ್ಯಾರ್ಥಿ ತಾನು ಬರೆದ ಉತ್ತರಪತ್ರಿಕೆಯ ಪ್ರತಿಯೊಂದು ಪೇಜ್‌ನಲ್ಲೂ ಸಹಿ ಹಾಕಬೇಕಾಗುತ್ತದೆ. ಹೆಚ್ಚುವರಿ ಶೀಟುಗಳನ್ನು ಪಡೆದರೂ, ಕೊನೆಯ ಶೀಟಿನಲ್ಲಿ ಪುಟಗಳ ಸಂಖ್ಯೆಯನ್ನು ಬರೆದು ಸಹಿ ಹಾಕಬೇಕು. ಇದರಿಂದ ಮುಂದೆ ತಾನು ಬರೆದ ಉತ್ತರಗಳ ಶೀಟು ಕಾಣೆಯಾಗಿದೆ ಎಂದು ವಿದ್ಯಾರ್ಥಿಗಳು ದೂರುವ ಅವಕಾಶ ಇಲ್ಲವಾಗುತ್ತದೆ. ಫಲಿತಾಂಶದ ಬಳಿಕ ವಿದ್ಯಾರ್ಥಿಗಳ ಇಂಥ ದೂರು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು ಎಂದು ಜೋಶಿ ನುಡಿದರು.
ಅದೇ ರೀತಿ ಪರೀಕ್ಷಾ ಫಲಿತಾಂಶ ಬಂದ ನಂತರ ರಿವ್ಯಾಲಿವೇಷನ್‌ಗೆ ಹಾಕುವ ವಿದ್ಯಾರ್ಥಿಗಳಿಗೆ ಬಿಗುವಾದ ಶರ್ತದ ಮೂಲಕ ಕಡಿವಾಣ ಹಾಕಲಾಗಿದೆ. ಹೀಗಾಗಿ ರಿವ್ಯಾಲಿವೇಷನ್‌ಗೆ ಅರ್ಜಿ ಹಾಕುವ ವಿದ್ಯಾರ್ಥಿಗಳ ಸಂಖ್ಯೆ ಭಾರೀ ಕಡಿಮೆಯಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ 200ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಆಸುಪಾಸಿನ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್ ಹಾಗೂ ಸ್ಮಾರ್ಟ್ ವಾಚ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಒಯ್ಯುವಂತಿಲ್ಲ.
ವಿದ್ಯಾರ್ಥಿಗಳು ಪರೀಕ್ಷೆಯ ದಿನ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಲು ಹಾಗೂ ಹಿಂದಿರುಗಲು ಕೆಎಸ್ಸಾರ್ಟಿಸಿ ಬಸ್ ಉಚಿತ ಪ್ರಯಾಣ ವ್ಯವಸ್ಥೆ ಮಾಡಿದೆ. ಹಾಲ್ ಟಿಕೇಟ್ ತೋರಿಸಿದರೆ ಅವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ಸಿಗಲಾರದು. ಉಡುಪಿ ನಗರ ಹಾಗೂ ಕುಂದಾಪುರದ ಕೆಲವು ರೂಟ್‌ಗಳಲ್ಲಿ ಇದರ ಪ್ರಯೋಜನ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಿಗುವ ಸಾಧ್ಯತೆ ಇದೆ.







