ಪುನರಾಯ್ಕೆಗಾಗಿ ಮೋದಿ ಹತಾಶರಾಗಿದ್ದಾರೆ: ಪ್ರತಿಪಕ್ಷ

ಹೊಸದಿಲ್ಲಿ,ಫೆ.28: ಪಾಕಿಸ್ತಾನದ ಸಶಸ್ತ್ರ ಪಡೆಗಳ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಅವರ ಸುರಕ್ಷಿತ ವಾಪಸಾತಿಗಾಗಿ ದೇಶವು ಹಾರೈಸುತ್ತಿರುವಾಗ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುತ್ತಿರುವುದಕ್ಕಾಗಿ ಪ್ರತಿಪಕ್ಷಗಳು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿವೆ.
ಗುರುವಾರ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ನಡೆಸಲಾದ ಈ ಕಾರ್ಯಕ್ರಮವನ್ನು ಬಿಜೆಪಿಯು ವಿಶ್ವದ ಅತ್ಯಂತ ದೊಡ್ಡ ವೀಡಿಯೊ ಕಾನ್ಫರೆನ್ಸ್ ಎಂದು ಬಣ್ಣಿಸಿದೆ.
ಮೋದಿ ಅವರು ಕೇವಲ ಪುನರಾಯ್ಕೆಗಾಗಿ ಹತಾಶಗೊಂಡಿದ್ದಾರೆ. ವೀಡಿಯೊ ಕಾನ್ಫರೆನ್ಸ್ ದಾಖಲೆಯನ್ನು ಸೃಷ್ಟಿಸಲು ಅವರು ಪಣ ತೊಟ್ಟಿದ್ದರು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವಿಟರ್‌ನಲ್ಲಿ ಕುಟುಕಿದ್ದಾರೆ.
ವಿಂಗ್ ಕಮಾಂಡರ್ ಅಭಿನಂದನ್ ಅವರ ಮರಳುವಿಕೆಗಾಗಿ ಭಾರತವು ಕಾಯುತ್ತಿರುವಾಗ ನಮ್ಮ ಪ್ರೈಮ್ ಟೈಮ್ ಪ್ರಧಾನಿಗಳು ಕೆಲವು ನಿಮಿಷಗಳ ಕಾಲ ಸಹ ಚುನಾವಣಾ ಪ್ರಚಾರವನ್ನು ನಿಲ್ಲಿಸುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ವಿಷಯವಾಗಿದೆ. ನಾವು ನಮ್ಮ ಯೋಧರ ಬೆಂಬಲಕ್ಕೆ ನಿಂತಿದ್ದೇವೆ ಮತ್ತು ಈ ಅಸಡ್ಡೆಯ ಕುರಿತು ಮೋದಿ ಸರಕಾರವನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆ ಎಂದು ಕಾಂಗ್ರೆಸ್ ಟ್ವೀಟಿಸಿದೆ.
ಬುಧವಾರ ಬೆಳಿಗ್ಗೆಯೂ ಪಾಕಿಸ್ತಾನಿ ಅತಿಕ್ರಮಣದ ವರದಿಗಳು ಬಂದಾಗ ಮೋದಿಯವರು ರಾಷ್ಟ್ರೀಯ ಯುವ ಸಂಸತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು,ಖೇಲೋ ಇಂಡಿಯಾ ಆ್ಯಪ್‌ನ್ನು ಬಿಡುಗಡೆಗೊಳಿಸಿದ್ದರು. ಗೃಹಸಚಿವ ರಾಜನಾಥ್ ಸಿಂಗ್ ಅವರು ದಿಲ್ಲಿಯಲ್ಲಿ ಭದ್ರತಾ ಸಭೆಯನ್ನು ನಡೆಸಿದ ಬಳಿಕ ಛತ್ತೀಸಗಡಕ್ಕೆ ತೆರಳಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು.
ಮೆಗಾ-ವೀಡಿಯೊ ಕಾನ್ಫರೆನ್ಸ್ ಆಯೋಜನೆಯ ಸಮಯದ ಬಗ್ಗೆ ಆಪ್ ನಾಯಕ ಸಂಜಯ ಸಿಂಗ್ ಅವರು ಬುಧವಾರ ಬಿಜೆಪಿಯನ್ನು ಪ್ರಶ್ನಿಸಿದ್ದರು.
ಬೂತ್ ಸಂಪರ್ಕ ಕಾರ್ಯಕ್ರಮಕ್ಕಾಗಿ ಮೋದಿಯವರನ್ನು ಟೀಕಿಸಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಅವರು,ದೇಶವು ಉದ್ವಿಗ್ನ ಸ್ಥಿತಿಯಲ್ಲಿರುವಾಗ ಮತ್ತು ದೇಶಕ್ಕೆ ಸದೃಢ ನಾಯಕತ್ವದ ಅಗತ್ಯವಿರುವಾಗ ಮೋದಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತ ತನ್ನ ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಲು ಪ್ರಯತ್ನಿಸಿದ್ದಾರೆ ಎಂದು ಟ್ವೀಟಿಸಿದ್ದಾರೆ.
ತನ್ನ ಚುನಾವಣಾ ಪ್ರಚಾರವನ್ನು ಮುಂದುವರಿಸುವ ಮೋದಿಯವರ ನಿರ್ಧಾರವು ಅಭಿನಂದನ್ ಅವರು ಕೆಲವೇ ದಿನಗಳಲ್ಲಿ ಭಾರತಕ್ಕೆ ಖಂಡಿತವಾಗಿ ಮರಳುತ್ತಾರೆ ಅಥವಾ ಪ್ರಧಾನಿಯವರು ಸಾಕಷ್ಟು ಕಾಳಜಿಯನ್ನು ಹೊಂದಿಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ಎನ್‌ಸಿ ನಾಯಕ ಉಮರ್ ಅಬ್ದುಲ್ಲಾ ಟೀಕಿಸಿದ್ದಾರೆ.
ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ ಅವರೂ ಮೋದಿಯವರನ್ನು ಟೀಕಿಸಿದ್ದಾರೆ.







