ಭಾರತ, ಪಾಕ್ ಸಂಘರ್ಷ ಶೀಘ್ರವೇ ಕೊನೆ: ಡೊನಾಲ್ಡ್ ಟ್ರಂಪ್

ಹನೋಯಿ (ವಿಯೆಟ್ನಾಮ್), ಫೆ. 28: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷ ಶೀಘ್ರವೇ ಕೊನೆಗೊಳ್ಳಲಿದೆ ಎಂಬ ವಿಶ್ವಾಸವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ವ್ಯಕ್ತಪಡಿಸಿದ್ದಾರೆ. ಎರಡು ಪರಮಾಣು ಶಕ್ತ ನೆರೆ ದೇಶಗಳ ನಡುವಿನ ಉದ್ವಿಗ್ನತೆಯನ್ನು ನಿವಾರಿಸುವ ಕೆಲಸದಲ್ಲಿ ಅಮೆರಿಕ ತೊಡಗಿದ್ದು, ‘ಶುಭ ಸುದ್ದಿ’ ನನ್ನ ಬಳಿ ಇದೆ ಎಂದು ಅವರು ಹೇಳಿದ್ದಾರೆ.
‘‘ಭಾರತ ಮತ್ತು ಅಮೆರಿಕದಿಂದ ಸಂಭ್ರಮ ಪಡಬಹುದಾದ ಸುದ್ದಿ ಅಮೆರಿಕಕ್ಕೆ ಬಂದಿದೆ’’ ಎಂದು ಟ್ರಂಪ್ ನುಡಿದರು.
ಉತ್ತರ ಕೊರಿಯದ ನಾಯಕ ಕಿಮ್ ಜಾಗ್-ಉನ್ ಜೊತೆಗೆ ಇಲ್ಲಿ ನಡೆದ ಎರಡನೇ ಶೃಂಗ ಸಮ್ಮೇಳನದ ಕೊನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯ ಆರಂಭದಲ್ಲೇ ಟ್ರಂಪ್ ಈ ಮಾತುಗಳನ್ನು ಹೇಳಿದರು.
‘‘ಉದ್ವಿಗ್ನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾವೂ ತೊಡಗಿಕೊಂಡಿದ್ದೇವೆ. ಈಗ ನಮ್ಮ ಬಳಿ ಶುಭ ಸುದ್ದಿ ಇದೆ’’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.
‘‘ಉದ್ವಿಗ್ನತೆ ಕೊನೆಗೊಳ್ಳಬಹುದು ಎಂದು ನನಗೆ ಅನಿಸುತ್ತಿದೆ. ಅದು ತುಂಬಾ ಸಮಯದಿಂದ ಇತ್ತು’’ ಎಂದರು.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್‌ಗೆ ಸೇರಿದ ಭಯೋತ್ಪಾದಕರು ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 40 ಸಿಆರ್‌ಪಿಎಫ್ ಸೈನಿಕರು ಹುತಾತ್ಮರಾಗಿದ್ದಾರೆ. ಈ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಪರಾಕಾಷ್ಠೆಗೇರಿದೆ.
ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಮಂಗಳವಾರ ಮುಂಜಾನೆ ಪಾಕಿಸ್ತಾನದ ಖೈಬರ್ ಪಖ್ತೂಂಖ್ವ ರಾಜ್ಯದ ಬಾಲಾಕೋಟ್‌ನಲ್ಲಿರುವ ಜೈಶೆ ಮುಹಮ್ಮದ್‌ನ ಅತಿ ದೊಡ್ಡ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದವು.







