ಕಾಶ್ಮೀರ ಬಂದ್: ಸಾಮಾನ್ಯ ಜನಜೀವನ ಅಸ್ತವ್ಯಸ್ತ

ಜಮ್ಮುಕಾಶ್ಮೀರ, ಫೆ. 28: ಕಣಿವೆಯಲ್ಲಿ ಹವಾಲದ ಮೂಲಕ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಹಲವು ಪ್ರತ್ಯೇಕತಾವಾದಿ ನಾಯಕರ ನಿವಾಸಗಳಿಗೆ ಎನ್‌ಐಎ ನಡೆಸಿದ ದಾಳಿಯ ವಿರುದ್ಧ ಪ್ರತ್ಯೇಕತಾವಾದಿಗಳ ಒಕ್ಕೂಟ ಕರೆ ನೀಡಿದ್ದ ಎರಡು ದಿನಗಳ ಬಂದ್‌ನ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಎರಡನೇ ದಿನವಾದ ಗುರುವಾರ ಕೂಡ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು.
ಬಂದ್‌ನ ಹಿನ್ನೆಲೆಯಲ್ಲಿ ಶ್ರೀನಗರದ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆದಾಗ್ಯೂ, ಕಣಿವೆಯಲ್ಲಿ ಬುಧವಾರ ರಾತ್ರಿಯಿಂದ ತೈಲ ಪೂರೈಕೆ ಆರಂಭವಾಗಿರುವುದರಿಂದ ಹೆಚ್ಚಿನ ಪೆಟ್ರೋಲ್ ಪಂಪ್‌ಗಳು ಬಾಗಿಲು ತೆರೆದಿದ್ದವು.
ಸಾರ್ವಜನಿಕ ವಾಹನಗಳು ರಸ್ತೆಗಿಳಿಯಲಿಲ್ಲ. ಆದರೆ, ನಗರದ ಕೆಲವು ಪ್ರದೇಶಗಳಲ್ಲಿ ಖಾಸಗಿ ಕಾರು ಹಾಗೂ ಆಟೊ ರಿಕ್ಷಾಗಳು ಸಂಚರಿಸುವುದು ಕಂಡು ಬಂತು. ಕಣಿವೆಯ ಇತರ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಕೂಡ ಇದೇ ರೀತಿಯ ಸ್ಥಿತಿ ಕಂಡು ಬಂತು.
ಪ್ರತ್ಯೇಕತಾವಾದಿಗಳ ವಿರುದ್ಧ ಎನ್‌ಐಎ ದಾಳಿ ವಿರುದ್ಧ ಹಾಗೂ ಕಲಂ 35 ಎ ಕುರಿತಂತೆ ಪ್ರತ್ಯೇಕತಾವಾದಿಗಳ ಒಕ್ಕೂಟ ಜೆಆರ್‌ಎಲ್ ಬುಧವಾರದಿಂದ ಎರಡು ದಿನಗಳ ಬಂದ್‌ಗೆ ಕರೆ ನೀಡಿತ್ತು.





