ಮಾ. 2 ರಿಂದ 'ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2019' ಫೈನಲ್
ಮಣಿಪಾಲ, ಫೆ. 28: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತಿತರ ಸರಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪರ್ಸಿಸ್ಟೆಂಟ್ ಸಿಸ್ಟಮ್ಸ್ ಸಂಸ್ಥೆ ಹಮ್ಮಿಕೊಂಡಿರುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2019ರ ಫೈನಲ್ ಮಾ. 2 ಮತ್ತು 3ರಂದು ಮಣಿಪಾಲದ ಎಂಐಟಿ ಸೇರಿದಂತೆ ದೇಶದ 48 ಕಡೆಗಳಲ್ಲಿ ನಡೆಯಲಿವೆ.
36 ಗಂಟೆಗಳ ಸಾಫ್ಟ್‌ವೇರ್ ಸರಣಿಯ ಫೈನಲ್‌ಗೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹಸಿರು ನಿಶಾನೆ ತೋರಲಿದ್ದಾರೆ. ಈ ಬಾರಿಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಲ್ಲಿ 18 ಸಚಿವಾಲಯಗಳು ಮತ್ತು 96 ಕೈಗಾರಿಕೆಗಳು ಗುರುತಿಸಿರುವ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ.
ಪ್ರಸ್ತುತ ಡಿಜಿಟಲ್ ಕ್ಷೇತ್ರದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪ್ರಯತ್ನ ನಡೆಸಿದ್ದಾರೆ ಎಂದು ಪರ್ಸಿಸ್ಟೆಂಟ್ ಸಿಸ್ಟಮ್ಸ್ ಅಧ್ಯಕ್ಷ ಮತ್ತು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಸಹ ಅಧ್ಯಕ್ಷ ಡಾ.ಆನಂದ್ ದೇಶಪಾಂಡೆ ಮತ್ತು ಚೀಫ್ ಆರ್ಕಿಟೆಕ್ಟ್ ಡೆಲಿವರಿ ಹೆಡ್ ವಿವೇಕ್ ಕುಲಕರ್ಣಿ ತಿಳಿಸಿದ್ದಾರೆ.
ಈ ಬಾರಿಯ ಸಾಫ್ಟ್‌ವೇರ್ ಸರಣಿಗೆ ಒಟ್ಟು 32,000 ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಫೈನಲ್‌ಗೆ ತಲಾ 6 ಮಂದಿಯನ್ನು ಒಳಗೊಂಡ ಒಟ್ಟು 1,348 ತಂಡಗಳನ್ನು ಪಟ್ಟಿ ಮಾಡಲಾಗಿದೆ. ತಂಡದಲ್ಲಿ ಉದ್ಯಮ ಅಥವಾ ಶಿಕ್ಷಣ ಸಂಸ್ಥೆಯಿಂದ ಇಬ್ಬರು ಮೆಂಟರ್‌ಗಳಿರುತ್ತಾರೆ ಎಂದು ಅವರು ವಿವರಿಸಿದ್ದಾರೆ.







