ಬಬ್ಬುಕಟ್ಟೆ- ಸೇವಂತಿಗುಡ್ಡೆ 19 ನೇ ವಾರ್ಡ್ ನಾಗರಿಕರಿಂದ ಪ್ರತಿಭಟನೆ
ರಸ್ತೆಗೆ ಮಂಜೂರಾದ ಹಣ ಬೇರೆಡೆಗೆ ವರ್ಗಾವಣೆ ಆರೋಪ

ಮಂಗಳೂರು, ಫೆ. 28: ಉಳ್ಳಾಲ ನಗರಸಭೆಯ 19ನೇ ವಾರ್ಡ್‌ನ ರಸ್ತೆ ಅಭಿವೃದ್ಧಿಗೆ ಮಂಜೂರಾಗಿದ್ದ ಮೊತ್ತವನ್ನು ಉಸ್ತುವಾರಿ ಸಚಿವ ಯು.ಟಿ. ಖಾದರ್ ಬೇರೆ ವಾರ್ಡ್‌ಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಾಗರಿಕರು ಗುರುವಾರ ಬಬ್ಬುಕಟ್ಟೆ ಹಿರಾ ಕಾಲೇಜಿನ ಪ್ರವೇಶ ರಸ್ತೆಯ ಬಳಿ ಪ್ರತಿಭಟನೆ ನಡೆಸಿದರು.
ಉಳ್ಳಾಲ ನಗರಸಭಾ ವ್ಯಾಪ್ತಿಯ ಬಬ್ಬುಕಟ್ಟೆ ಸೇವಂತಿಗುಡ್ಡೆ, ತಾರಿಪಡ್ಪು, ಕಲ್ಲಾಪು ಸಂಪರ್ಕ ರಸ್ತೆ ಅಭಿವೃದ್ಧಿಗೆಂದು ಸರಕಾರದಿಂದ 50 ಲಕ್ಷ ರೂ. ಮಂಜೂರಾಗಿದ್ದು, 2018ರ ಮಾರ್ಚ್‌ನಲ್ಲಿ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಶಿಲಾನ್ಯಾಸ ನೆರವೇರಿಸಿದರು. ಆ ಬಳಿಕ ಉಳ್ಳಾಲ ನಗರಸಭೆಗೆ ನಡೆದ ಚುನಾವಣೆಯಲ್ಲಿ ಈ ವಾರ್ಡ್‌ನಲ್ಲಿ ಕಾಂಗ್ರೆಸ್ ಪ್ರತಿನಿಧಿ ಪರಾಜಯಗೊಂಡರಲ್ಲದೆ, ಪಕ್ಷೇತರ ಅಭ್ಯರ್ಥಿ ಮುಸ್ತಾಕ್ ಪಟ್ಲ ಆಯ್ಕೆಯಾಗಿದ್ದರು. ಈ ಕಾರಣದಿಂದಲೇ ಕಳೆದ ವರ್ಷದ ನವಂಬರ್‌ನಲ್ಲಿ ಶಾಸಕರು ಈ ಯೋಜನೆಯನ್ನು ಬೇರೆ ವಾರ್ಡ್‌ಗೆ ವರ್ಗಾಯಿಸಿದ್ದಾರೆ ಎಂದು ನಾಗರಿಕರು ಆರೋಪಿಸಿದರು.
ಈ ಸಂದರ್ಭ ಸ್ಥಳೀಯ ಕೌನ್ಸಿಲರ್ ಮುಸ್ತಾಕ್ ಪಟ್ಲ, 18ನೇ ವಾರ್ಡ್‌ನ ಸದಸ್ಯ ದಿನಕರ್ ಉಳ್ಳಾಲ್, ಸೇವಂತಿಗುಡ್ಡೆಯ ಕೊರಗತನಿಯ ಸೇವಾ ಸಮಿತಿಯ ಕಾರ್ಯದರ್ಶಿ ಮೋಹನ್ ಸಾಲಿಯಾನ್, ಎ.ಕೆ.ಕುಕ್ಕಿಲ ಮಾತಾಡಿದರು. ಸದ್ದಾಮ್ ಮೇಲಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.





