ಉಳ್ಳಾಲ ಹೊಸ ತಾಲೂಕು: ಸಚಿವ ಯು.ಟಿ. ಖಾದರ್

ಮಂಗಳೂರು, ಫೆ. 28: ಉಳ್ಳಾಲ ನೂತನ ತಾಲೂಕಾಗಿ ಘೋಷಣೆಯಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಮಂಗಳೂರು ತಾಲೂಕಿನಿಂದ ಮುಲ್ಕಿ ಮತ್ತು ಮೂಡುಬಿದಿರೆ ಬೇರ್ಪಟ್ಟು ಪ್ರತ್ಯೇಕ ತಾಲೂಕು ಆಗುತ್ತಲೇ ‘ಉಳ್ಳಾಲ’ಕ್ಕೂ ತಾಲೂಕು ಮಾನ್ಯತೆ ಲಭಿಸಿದೆ ಎಂದವರು ಹೇಳಿದ್ದಾರೆ.
ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಪುದು, ಮೇರಮಜಲು, ತುಂಬೆ ಹೊರತುಪಡಿಸಿ ಬಂಟ್ವಾಳ ತಾಲೂಕಿನ ಮುಡಿಪು ಹೋಬಳಿಯ ನರಿಂಗಾನ, ಕೈರಂಗಳ, ಬಾಳೆಪುಣಿ, ಇರಾ, ಪಜೀರ್, ಸಜಿಪನಡು, ಸಜಿಪಪಡು ಗ್ರಾಮ ನೂತನ ತಾಲೂಕಿಗೆ ಸೇರಲಿವೆ ಎಂದವರು ತಿಳಿಸಿದ್ದಾರೆ.
ಅಭಿವೃದ್ಧಿ ಪಥದಲ್ಲಿರುವ ಉಳ್ಳಾಲ ತಾಲೂಕು ರಚನೆಯಿಂದ ಜನರ ವ್ಯವಹಾರಕ್ಕೆ ಅನುಕೂಲವಾಗಲಿದೆ. ಆಡಳಿತ ವ್ಯವಸ್ಥೆ ಉಳ್ಳಾಲಕ್ಕೆ ಕೇಂದ್ರೀಕೃತವಾಗುವುದರಿಂದ ಜನರ ಅಲೆದಾಟ ತಪ್ಪಲಿದೆ. ನಗರದ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂದವರು ಅಭಿಪ್ರಾಯಿಸಿದ್ದಾರೆ.
ಸದ್ದಿಲ್ಲದೆ ತಾಲೂಕಾದ ಉಳ್ಳಾಲ!
ಸಾಮಾನ್ಯವಾಗಿ ತಾಲೂಕು ರಚನೆಗೆ ಸಾರ್ವಜನಿಕರಿಂದ ಭಾರೀ ಆಗ್ರಹ, ಒತ್ತಡ, ಧರಣಿ, ಪ್ರತಿಭಟನೆ ನಡೆಯಬೇಕಾಗುತ್ತದೆ. ದ.ಕ. ಜಿಲ್ಲೆಯ ಮೂಡುಬಿದಿರೆ, ಕಡಬ ಹಾಗೂ ಮುಲ್ಕಿ ತಾಲೂಕು ರಚನೆಗೆ ನಡೆದ ಹೋರಾಟವೂ ಅಷ್ಟಿಷ್ಟೇನಲ್ಲ. ಅದರಲ್ಲೂ ಕಡಬ ರಚನೆಯ ಹಿಂದೆ ಸುದೀರ್ಘ ನಾಲ್ಕು ದಶಕಗಳ ಹೋರಾಟವಿದ್ದರೆ, ಮುಲ್ಕಿ ತಾಲೂಕು ರಚನೆಯ ಬೇಡಿಕೆ ಐದು ದಶಕದ್ದು. ಆದರೆ ಉಳ್ಳಾಲ ತಾಲೂಕು ರಚನೆಗೆ ಸ್ಥಳೀಯರಿಂದ ಬಲವಾದ ಆಗ್ರಹವೇನೂ ಇರಲಿಲ್ಲ. ಅಧಿಕಾರಿಗಳ ಮಟ್ಟದಲ್ಲೂ ಪ್ರಸ್ತಾವ ಇದ್ದಂತಿಲ್ಲ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೋಬಳಿಗಳ ರಚನೆಗೆ ಸಾರ್ವಜನಿಕರ ಬೇಡಿಕೆ ಇತ್ತು. ಆದರೆ, ಸ್ಥಳೀಯ ಕ್ಷೇತ್ರದ ಶಾಸಕರೂ ಆಗಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ರ ವಿಶೇಷ ಆಸಕ್ತಿಯಿಂದ ಉಳ್ಳಾಲ ತಾಲೂಕು ರಚನೆಯಾಗಿದೆ. ಆ ಮೂಲಕ ಅವರು ಉಳ್ಳಾಲ ಭಾಗದ ಜನತೆಗೆ ಅನಿರೀಕ್ಷಿತ ಕೊಡುಗೆ ನೀಡಿದ್ದಾರೆ.
ಉಳ್ಳಾಲ ದ.ಕ. ಜಿಲ್ಲೆಯ 9ನೆ ತಾಲೂಕು ಆಗಿ ಗುರುತಿಸಲ್ಪಡಲಿದೆ. ಮೂಡುಬಿದಿರೆ ಮತ್ತು ಕಡಬ ತಾಲೂಕಿನ ಅಧಿಕೃತ ಉದ್ಘಾಟನೆ ಇನ್ನೊಂದು ವಾರದಲ್ಲಿ ನಡೆಯಲಿದೆ. ಮುಲ್ಕಿ ತಾಲೂಕು ಎರಡು ದಿನದ ಹಿಂದೆಯಷ್ಟೇ ಘೋಷಣೆಯಾಗಿದೆ. ಇದೀಗ ಉಳ್ಳಾಲ ತಾಲೂಕು ರಚನೆಗೆ ಕ್ಷಣಗಣನೆ ಆಗಿದೆ. ದ.ಕ. ಜಿಲ್ಲೆಗೆ ಸೇರ್ಪಡೆಗೊಂಡ ಹೊಸ ನಾಲ್ಕು ತಾಲೂಕುಗಳ ಪೈಕಿ ಮೂರು ಮಂಗಳೂರು ತಾಲೂಕಿನಿಂದಲೇ ಆಗಿರುವುದು ಗಮನಾರ್ಹ.
ಇದು ಸಚಿವ ಸಂಪುಟ ಸಭೆಗೆ ಬಾರದೆ ನೇರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ತಾಲೂಕು ರಚನೆಗೆ ಸಂಬಂಧಿಸಿ ಇಂತಹ ಆದೇಶ ಬಂದಿರುವುದು ಇತಿಹಾಸದಲ್ಲೇ ಮೊದಲು. ಇದಕ್ಕಾಗಿ ನಾನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.
-ಯು.ಟಿ.ಖಾದರ್, ಉಸ್ತುವಾರಿ ಸಚಿವರು ದ.ಕ. ಜಿಲ್ಲೆ







