ಕಂಕನಾಡಿ ಮಾರುಕಟ್ಟೆ ಸಂಕೀರ್ಣಕ್ಕೆ ಶಿಲಾನ್ಯಾಸ

ಮಂಗಳೂರು, ಫೆ.28: ಸಾರ್ವಜನಿಕರ ಬಹುಕಾಲದ ಬೇಡಿಕೆಯಂತೆ ಕಂಕನಾಡಿಯಲ್ಲಿ ಪರಿಸರಸ್ನೇಹಿ ಹಾಗೂ ಮಾದರಿ ಮಾರುಕಟ್ಟೆ ನಿರ್ಮಾಣಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಕಸ ವಿಲೇವಾರಿಯಾಗಲು ನೂತನ ತಂತ್ರಜ್ಞಾನವನ್ನು ಮಾರುಕಟ್ಟೆಯಲ್ಲಿ ಅಳವಡಿಸಲಾ ಗುವುದು. ಸೋಲಾರ್‌ನಿಂದ ವಿದ್ಯುತ್ ಉತ್ಪಾದನೆ, ನೀರು ಸಂಸ್ಕರಣೆ, ಎಲ್‌ಇಡಿ ಲೈಟ್ ಅಳವಡಿಕೆ, ನೀರಿಂಗಿಸುವಿಕೆ ಮೊದಲಾದವುಗಳ ಮೂಲಕ ಈ ಮಾರುಕಟ್ಟೆ ಪರಿಸರ ಪೂರಕವಾಗಲಿದೆ ಎಂದರು.
ಬೆಂಗಳೂರು ನಗರದ ಬಳಿಕ ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತದೆ. ಹಾಗಾಗಿ ಮಂಗಳೂರಿನಿಂದ ಬೇರೆ ನಗರಕ್ಕೆ ವಲಸೆ ಹೋಗುವುದು ತಪ್ಪಬೇಕು. ನಗರದ ಜನ ಇಲ್ಲಿನ ಮೂಲಸೌಕರ್ಯ ಮೆಚ್ಚಿಕೊಂಡು ಇಲ್ಲೇ ಉಳಿಯುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಸಚಿವ ಖಾದರ್ ನುಡಿದರು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ್ ಕೆ., ಮುಖ್ಯಸಚೇತಕ ಶಶಿದರ ಹೆಗ್ಡೆ, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಪ್ರೇಮಾನಂದ ಕಾಮತ್, ಆಶೋಕ್ ಕುಮಾರ್ ಡಿ.ಕೆ., ಪ್ರವೀಣ್‌ಚಂದ್ರ ಆಳ್ವ, ಆಶಾಡಿಸಿಲ್ವ, ಪ್ರತಿಭಾ ಕುಳಾಯಿ, ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಮತ್ತಿತರರು ಉಪಸ್ಥಿತರಿದ್ದರು.
ಅಬಕಾರಿ ಕಾಯ್ದೆ ಉಲ್ಲಂಘಿಸಿದರೆ ಕಠಿಣ ಕ್ರಮ
ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತ ಮದ್ಯ ದಾಸ್ತಾನು, ಮಾರಾಟ ಮಾಡುವುದು ಹಾಗೂ ಸೇವಿಸುವುದು ಅಬಕಾರಿ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾದ ಕಾರಣ ಇಂತಹ ಅಕ್ರಮಗಳು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆಯ ಉಪಾಯುಕ್ತರ ಪ್ರಕಟನೆ ತಿಳಿಸಿದೆ.
ಅದಲ್ಲದೆ ಸಭಾಂಗಣ, ಹಾಲ್ ಇತ್ಯಾದಿಗಳಲ್ಲಿ ನಡೆಯುವ ಸಭೆ-ಸಮಾರಂಭ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಅಬಕಾರಿ ಇಲಾಖೆಯಿಂದ ಸಿಎಲ್-5 ಸನ್ನದನ್ನು ಹೊಂದದೆ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವುದು ಕೂಡ ಅಪರಾಧವಾಗಿರುತ್ತದೆ. ಇಂತಹ ಯಾವುದೇ ಘಟನೆಗಳು ಇಲಾಖೆಯ ಗಮನಕ್ಕೆ ಬಂದಲ್ಲಿ ಸಂಬಂಧಪಟ್ಟ ಸಭಾಂಗಣ/ಹಾಲ್‌ಗಳ ಮಾಲಕರ ವಿರುದ್ಧ ಅಬಕಾರಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.







