ಆಮ್ರಪಾಲಿ ಸಮೂಹದ ಮುಖ್ಯಸ್ಥ, ಇತರ ಇಬ್ಬರ ಬಂಧನಕ್ಕೆ ದಿಲ್ಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಅನುಮತಿ

ಹೊಸದಿಲ್ಲಿ, ಫೆ. 28: ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿ ಆಮ್ರಪಾಲಿ ಸಮೂಹದ ಮುಖ್ಯ ಆಡಳಿತ ನಿರ್ದೇಶಕ ಅನಿಲ್ ಶರ್ಮಾ ಹಾಗೂ ಇಬ್ಬರು ನಿರ್ದೇಶಕರನ್ನು ಬಂಧಿಸಲು ಸುಪ್ರೀಂ ಕೋರ್ಟ್ ಗುರುವಾರ ಪೊಲೀಸರಿಗೆ ಅನುಮತಿ ನೀಡಿದೆ. ಶರ್ಮಾ ಹಾಗೂ ಇತರ ಇಬ್ಬರು ನಿರ್ದೇಶಕರಾದ ಶಿವ್ ಪ್ರಿಯಾ ಹಾಗೂ ಅಜಯ್ ಕುಮಾರ್ ಅವರ ವೈಯುಕ್ತಿಕ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೂಡ ನ್ಯಾಯಾಲಯ ಅವಕಾಶ ನೀಡಿದೆ.
ಉತ್ತರಪ್ರದೇಶದಲ್ಲಿ ಆಮ್ರಪಾಲಿ ಸಮೂಹದ ಯೋಜನೆಯಲ್ಲಿ ಖಾದಿರಿಸಿದ ಸುಮಾರು 42 ಸಾವಿರ ಫ್ಲಾಟ್‌ಗಳನ್ನು ತಮಗೆ ಹಸ್ತಾಂತರಿಸುವಂತೆ ಕೋರಿ ಫ್ಲಾಟ್ ಖರೀದಿಸಿದವರ ಗುಂಪು ಸಲ್ಲಿಸಿದ ದೂರನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಗೃಹ ಖರೀದಿದಾರರ ಸುಮಾರು 3000 ಕೋ. ರೂಪಾಯಿ ಯನ್ನು ಕಂಪೆನಿ ಇತರ ಉದ್ದೇಶಗಳಿಗೆ ಬಳಸಿಕೊಂಡಿದೆ ಎಂದು ಆರೋಪಿಸಿ ದೂರುದಾರರ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ವಕೀಲ ಎಂ.ಎಲ್. ಲಾಹೋಟಿ ತಿಳಿಸಿದ್ದರು. ಬಳಿಕ ಫ್ಲಾಟ್‌ಗಳನ್ನು ವಶಪಡಿಸಿಕೊಳ್ಳುವಂತೆ ಹಾಗೂ ಸಮೂಹದ ಸೊತ್ತನ್ನು ಮಾರಾಟ ಮಾಡುವಂತೆ ಡಿಸೆಂಬರ್‌ನಲ್ಲಿ ನ್ಯಾಯಾಲಯ ಆದೇಶಿಸಿತ್ತು.
ವಂಚನೆಯ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲು ಹಾಗೂ ವಿಚಾರಣೆ ನಡೆಸಲು ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧ ಘಟಕಕ್ಕೆ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ಯು.ಯು. ಲಲಿತ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ಹೊಟೇಲ್‌ನಲ್ಲಿ ಉತ್ತರಪ್ರದೇಶದ ಪೊಲೀಸರ ಗೃಹ ಬಂಧನದಲ್ಲಿ ಇರುವ ನಿರ್ದೇಶಕರನ್ನು ಯಾವುದೇ ತನಿಖಾ ಸಂಸ್ಥೆ ಬಂಧಿಸುವುದನ್ನು ನಾವು ಎಂದಿಗೂ ನಿಲ್ಲಿಸಲಾರೆವು ಎಂದು ನ್ಯಾಯಾಲಯ ಹೇಳಿದೆ.





