ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲ: ಎಚ್.ಡಿ.ದೇವೇಗೌಡ

ಕಡೂರು, ಫೆ.28: ಕಳೆದ ಹತ್ತು ವರ್ಷಗಳಿಂದ ಈ ಭಾಗದ ಸಂಸದರಾಗಿ ಅನುದಾನ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಕ್ಷೇತ್ರದ ಅಭ್ಯುದಯದ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಮಾಜಿ ಪ್ರಧಾನಿ, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಪಕ್ಷಕ್ಕೆ ಕೇವಲ 37 ಸ್ಥಾನ ನೀಡಿದರೂ ಜನರ ತೀರ್ಪಿಗೆ ತಲೆಬಾಗಿದ್ದೇವೆ. ಈಗಾಗಲೇ ರಾಜ್ಯದಲ್ಲಿ ಸುಮಾರು 10 ಲಕ್ಷ ಜನರಿಗೆ ಸಾಲಮನ್ನಾ ಮಾಡಲಾಗಿದೆ. ಉಳಿದವರಿಗೆ ಸಾಲಮನ್ನಾ ಮಾಡಬೇಕಿದೆ. ಬ್ಯಾಂಕ್‌ನವರೇ ಬೇರೆಯವರ ಹೆಸರಿನಲ್ಲಿ ಸಾಲಪಡೆದಿರುವ ಬಗ್ಗೆ ಖಚಿತವಾಗಿದ್ದು. ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ತನಿಖೆ ನಡೆಸಿ ನಿಜವಾದ ರೈತರಿಗೆ ಸಾಲಮನ್ನಾವಾಗಬೇಕೆಂಬ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಹಿಂದಿನ ಸರಕಾರದ 18 ಸಾವಿರ ಕೋಟಿ ರೂ. ಬಾಕಿ ಕೊಡಬೇಕಿದೆ. ತೆಂಗಿನ ಸಮಸ್ಯೆಯ ಬಗ್ಗೆ ತಿಳಿಸಲು ಪ್ರಧಾನಿ ಭೇಟಿ ಮಾಡಲಾಗಿದ್ದು. ಅವರು ನಮ್ಮ ಮನವಿಗೆ ಸ್ಪಂದಿಸಲಿದ್ದಾರೆ. ರೈತರ ಬಗ್ಗೆ ಹಿಂದಿನಿಂದಲೂ ಹೋರಾಟ ಮಾಡುತ್ತಾ ಬರಲಾಗಿದೆ. ದೇಶದ ವಿಷಯದಲ್ಲಿ ಪಕ್ಷಬೇದ ಮರೆತು ಭಾರತೀಯರಲ್ಲರೂ ಒಂದಾಗಬೇಕಿದೆ. ಸೈನಿಕರಿಗೆ ಶಕ್ತಿ ತುಂಬಬೇಕಿದೆ ಎಂದರು.
ಎಮ್ಮೆದೊಡ್ಡಿ ಸಮಸ್ಯೆ ಹಲವಾರು ವರ್ಷಗಳಿಂದ ಮುಂದುವರಿದುಕೊಂಡು ಬಂದಿದ್ದು. ಇದಕ್ಕೆ ಅಂತ್ಯ ಹಾಡಲಾಗಿದೆ. ಕಡೂರು ತಾಲೂಕಿಗೆ ಭದ್ರಾ ಮೇಲ್ದಂಡೆಯಿಂದ ನೀರು ತರುವ ಯೋಜನೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬರಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಬೇಕಿದೆ. ಮುಸ್ಲಿಮರಿಗೆ ಮತ್ತು ಹೆಣ್ಣು ಮಕ್ಕಳಿಗೆ ನಮ್ಮ ಅವಧಿಯಲ್ಲಿ ಮೀಸಲಾತಿ ದೊರಕಿಸಿಕೊಡಲಾಗಿದೆ. ಯಾವುದೇ ಸರಕಾರಗಳು ರೈತರನ್ನ ಕಡೆಗಣಿಸಿದರೆ ಯಾರೂ ಉಳಿಯುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಸಚಿವ ರೇವಣ್ಣ, ಉಪಸಭಾಪತಿ ಎಸ್.ಎಲ್. ಧರ್ಮೇಗೌಡ, ಶಾಸಕರಾದ ಬೆಳ್ಳಿಪ್ರಕಾಶ್, ಬಾಲಕೃಷ್ಣ, ಜಿಪಂ ಸದಸ್ಯ ಕೆ.ಆರ್. ಮಹೇಶ್‌ಒಡೆಯರ್, ತಾಪಂ ಉಪಾಧ್ಯಕ್ಷ ಎಸ್.ಕೆ. ಚಂದ್ರಪ್ಪ, ಪುರಸಭಾ ಅಧ್ಯಕ್ಷ ಎಂ. ಮಾದಪ್ಪ, ಉಪಾಧ್ಯಕ್ಷ ರಾಜೇಶ್, ತರೀಕೆರೆ ಉಪವಿಭಾಗಾಧಿಕಾರಿ ಬಿ.ಆರ್. ರೂಪಾ, ತಹಶೀಲ್ದಾರ್ ಉಮೇಶ್, ಎಇಇ ದಯಾನಂದ ಮತ್ತಿತರರಿದ್ದರು.
ಸಮ್ಮಿಶ್ರ ಸರಕಾರಕ್ಕೆ 8 ತಿಂಗಳು ತುಂಬಿದೆ. ಸಿದ್ದರಾಮಯ್ಯ 5 ವರ್ಷದಲ್ಲಿ ನೀಡಿದ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ ರೈತರ ಬೆಳೆಸಾಲಮನ್ನಾ ಮಾಡಲಾಗಿದೆ. ಪಕ್ಷದ ಪ್ರಣಾಳಿಕೆಯಂತೆ ರೈತರಿಗೆ ಸ್ಪಂದಿಸಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ.
-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ, ಹಾಸನ ಲೋಕಸಭಾ ಕ್ಷೇತ್ರದ ಸಂಸದ







