ಫ್ಲೈ ಓವರ್ ನಿರ್ಮಾಣಕ್ಕೆ ಆರ್ಥಿಕ ಸಮಸ್ಯೆ: ನವಯುಗ ಕಂಪೆನಿಗೆ 62 ಕೋ.ರೂ. ಸಾಲ ನೀಡಲು ನಿರ್ಧಾರ
ರಾ.ಹೆ.66ರ ಹೆದ್ದಾರಿ ಕಾಮಗಾರಿಯ ಪ್ರಗತಿ ಪರಿಶೀಲನೆ

ಮಂಗಳೂರು, ಫೆ. 28: ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲು ಕಳೆದ ಹಲವು ವರ್ಷದಿಂದ ಹೆಣಗಾಡುತ್ತಿರುವ ಗುತ್ತಿಗೆದಾರ ಸಂಸ್ಥೆಗೆ ಖಾಸಗಿ ಬ್ಯಾಂಕ್‌ನಿಂದ 55 ಕೋ.ರೂ. ಸಾಲ ಹಾಗೂ ಕೇಂದ್ರ ಸರಕಾರದಿಂದ 7 ಕೋ.ರೂ. ನೆರವು ನೀಡಲು ಕೇಂದ್ರ ಭೂಸಾರಿಗೆ ಸಚಿವಾಲಯ ನಿರ್ಧರಿಸಿದೆ.
ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯ ಕಾರ್ಯದರ್ಶಿ ವೈಭವ ದಾಂಗೆ ಮತ್ತು ನವಯುಗ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಗುರುವಾರ ಮಂಗಳೂರಿಗೆ ಆಗಮಿಸಿ ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಫ್ಲೈ ಓವರ್ ಕಾಮಗಾರಿಯ ಪ್ರಗತಿ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಆರ್ಥಿಕ ಸಮಸ್ಯೆ ಹಾಗೂ ಬ್ಯಾಂಕ್‌ಗಳಿಂದ ನೆರವು ದೊರೆಕದ ಕಾರಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಗೆ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ ಎಂಬ ಅಂಶವನ್ನು ಮನದಟ್ಟು ಮಾಡಿಕೊಂಡ ಕಾರ್ಯದರ್ಶಿ ವೈಭವ ದಾಂಗೆ ಕಂಪೆನಿಗೆ ನೆರವಿನ ಭರವಸೆ ನೀಡುವ ಮೂಲಕ ಕಾಮಗಾರಿಗೆ ವೇಗ ನೀಡಲು ಸೂಚಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು ಕಾಮಗಾರಿ ನಡೆಸುತ್ತಿರುವ ಕಂಪೆನಿಗೆ ಆರ್ಥಿಕ ನೆರವು ಪ್ರಕಟಿಸಲಾಗಿದೆ. ಅದರಂತೆ ರಾ.ಹೆ.ಯಲ್ಲಿ ನವಯುಗದಿಂದ ಬಾಕಿ ಉಳಿದಿರುವ ಸರ್ವಿಸ್ ರಸ್ತೆ ಹಾಗೂ ಜಂಕ್ಷನ್ ಸುಧಾರಣೆಯನ್ನು ಮಾ.15ರೊಳಗೆ ಪೂರ್ಣ ಗೊಳಿಸಲಾಗುವುದು. ತೊಕ್ಕೊಟ್ಟು ಫ್ಲೈ ಓವರ್ ಹಾಗೂ ಉಜ್ಜೋಡಿ ಅಂಡರ್ ಪಾಸ್ ಪೂರ್ಣ ಮಾಡಲು ಎಪ್ರಿಲ್ 10ರ ಗಡುವು ನೀಡಲಾಗಿದೆ. ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿಯನ್ನು ಮೇ 31ರೊಳಗೆ ಪೂರ್ಣಗೊಳಿಸುವ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯ ಕಾರ್ಯದರ್ಶಿ ವೈಭವ ದಾಂಗೆ ಮತ್ತು ನವಯುಗ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖ ನಿರ್ಧಾರಕ್ಕೆ ಬರಲಾಗಿದೆ ಎಂದರು.
ತಲಪಾಡಿ-ಕುಂದಾಪುರ ಹೆದ್ದಾರಿ ಚತುಷ್ಪಥ ಕಾಮಗಾರಿ ಪ್ರಾರಂಭದಲ್ಲಿ ವೇಗ ಪಡೆದಿತ್ತು. ಆದರೆ ಪಂಪ್‌ವೆಲ್‌ನಲ್ಲಿ ಮಹಾವೀರ ವೃತ್ತದ ಸ್ಥಳಾಂತರ ಹಾಗೂ ಬಸ್ ನಿಲ್ದಾಣ ಮತ್ತು ವಿನ್ಯಾಸ ಬದಲಾವಣೆ ವಿಚಾರದಲ್ಲಿ 2016ರವರೆಗೂ ವಿಳಂಬವಾಗುತ್ತಾ ಹೋಯಿತು. ಆ ಬಳಿಕ ಹಣಕಾಸು ಸಮಸ್ಯೆಯಿಂದ ಕಂಪೆನಿಯು ಕಾಮಗಾರಿ ನಿಧಾನಗೊಳಿಸಿತ್ತು. ಹಲವು ಬಾರಿ ಗಡುವು ವಿಧಿಸಿದರೂ ಕೆಲಸ ಮುಗಿಯಲಿಲ್ಲ. ಕೆಲವು ಕಾರಣದಿಂದ ಬ್ಯಾಂಕ್‌ನಿಂದಲೂ ಕಂಪೆನಿಗೆ ನೆರವು ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಣಕಾಸಿನ ನೆರವಿಗೆ ಕ್ರಮ ಕೈಗೊಳ್ಳಲಾಗಿದ್ದು, ಹೆದ್ದಾರಿಯ ಎಲ್ಲ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂದರು.
ಈ ಸಂದರ್ಭ ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ಆರ್.ಕೆ. ಸೂರ್ಯವಂಶಿ, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ, ನವಯುಗ ಕಂಪೆನಿಯ ಸ್ಯಾಮ್ಸನ್ ವಿಜಯ ಕುಮಾರ್, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು.
ಸುರತ್ಕಲ್: ಸ್ಥಳೀಯರಿಗೆ ಟೋಲ್ ವಿನಾಯಿತಿ ಮುಂದುವರಿಕೆ
ಸುರತ್ಕಲ್‌ನ ಟೋಲ್‌ಗೇಟನ್ನು ಅಲ್ಲಿಂದ ತೆರವುಗೊಳಿಸಿ ಬ್ರಹ್ಮರಕೂಟ್ಲು ಟೋಲ್‌ಗೇಟ್ ಜತೆ ವಿಲೀನಗೊಳಿಸುವ ಸಾಧ್ಯತೆ ಬಗ್ಗೆ ಪ್ರಸ್ತಾವ ಪರಿಶೀಲನೆ ಯಲ್ಲಿದೆ. ಸಚಿವ ನಿತಿನ್ ಗಡ್ಕರಿ ತಿಂಗಳೊಳಗೆ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಅಲ್ಲಿಯವರೆಗೂ ಹಿಂದಿನಂತೆಯೇ ಸ್ಥಳೀಯರಿಗೆ ವಿನಾಯಿತಿ ಮುಂದುವರಿಸಲಾಗುವುದು ಹಾಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಬಿ.ಸಿ.ರೋಡ್-ಅಡ್ಡಹೊಳೆ ಕಾಮಗಾರಿಗೆ ವೇಗ
ಬಿ.ಸಿ.ರೋಡ್-ಅಡ್ಡಹೊಳೆ ಮಧ್ಯೆ ನಿಧಾನಗೊಂಡಿದ್ದ ಹೆದ್ದಾರಿ ಚತುಷ್ಪಥ ಕಾಮಗಾರಿಯು ವೇಗ ಪಡೆದುಕೊಂಡಿದೆ. 21 ಕಿ.ಮೀ. ಪ್ರದೇಶದಲ್ಲಿ ಅರಣ್ಯ ಅನುಮೋದನೆ ಸಿಗದಿರುವುದು ಹಾಗೂ ಕೆಲವು ಹೊಸ ರಚನೆಗಳ ಸೇರ್ಪಡೆ ಇತ್ಯಾದಿ ತಾಂತ್ರಿಕ ಕಾರಣವು ನಿವಾರಣೆಯ ಹಂತದಲ್ಲಿದೆ. ಪ್ರಸ್ತುತ 27 ಕಡೆ ತಡೆಗೋಡೆ ಮೋರಿ ಕೆಲಸ ನಡೆಯುತ್ತಿದೆ. 47 ಹೆಕ್ಟೇರ್ ಪ್ರದೇಶ ಭೂಕುಸಿತವಾದ ಕಾರಣ ಹೆಚ್ಚುವರಿ ಭೂಸ್ವಾಧೀನ ಆಗಬೇಕಿದೆ. ಅದಾದ ಬಳಿಕ ಹೆದ್ದಾರಿ ಕೆಲಸ ವೇಗ ಪಡೆಯಲಿದೆ.
ಶೀಘ್ರ 2 ಮಹತ್ವದ ಯೋಜನೆಗಳಿಗೆ ಶಿಲಾನ್ಯಾಸ
ಮುಲ್ಕಿ-ಕಟೀಲು-ಬಿ.ಸಿ.ರೋಡ್, ಮೆಲ್ಕಾರ್-ಕೊಣಾಜೆ-ತೊಕ್ಕೊಟ್ಟು, ಕುಲಶೇಖರ-ಕಾರ್ಕಳ ಚತುಷ್ಪಥ ರಸ್ತೆ ಹಾಗೂ 193 ಕೋ.ರೂ.ನ ಕುಳಾ ಮೀನುಗಾರಿಕಾ ಜೆಟ್ಟಿಯ ಶಿಲಾನ್ಯಾಸವನ್ನು ಶೀಘ್ರ ಮಾಡಲಾಗುವುದು. ಕೇಂದ್ರ ಸಚಿವ ನಿತಿನ್ ಗಡ್ಕರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.







