ಬಿ.ಸಿ.ರೋಡ್ ಮಿನಿವಿಧಾನ ಸೌಧದಲ್ಲಿ ಆರ್‍ಟಿಸಿಗಾಗಿ ಪರದಾಟ: ಶಾಸಕ ರಾಜೇಶ್ ನಾಯ್ಕ್ ಭೇಟಿ-ಪರಿಶೀಲನೆ

ಬಂಟ್ವಾಳ, ಫೆ. 28: ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ರೈತ ಸಮ್ಮಾನ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಪಹಣಿ (ಆರ್‍ಟಿಸಿ)ಯ ಅಗತ್ಯವಿದ್ದು, ಕಳೆದ ಎರಡು ದಿನಗಳಿಂದ ರೈತರು ಪಹಣಿಪತ್ರಕ್ಕಾಗಿ ಬಂಟ್ವಾಳ ಮಿನಿವಿಧಾನಸೌಧದಲ್ಲಿರುವ ಅಟಲ್ ನೆಮ್ಮದಿ ಕೇಂದ್ರದಲ್ಲಿ ಸರತಿಯ ಸಾಲಿ ದೃಶ್ಯ ಕಂಡುಬಂದಿದ್ದು, ಈ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಗುರುವಾರ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಂದೆಡೆ ಆಧಾರ್ ನೋಂದಣಿ, ಮತ್ತೊಂದೆಡೆ ವಿವಿಧ ಅರ್ಜಿಗಳ ಸಲ್ಲಿಕೆಗೆ ಜನರ ಸಂದಣಿ, ಇದರ ಮಧ್ಯೆ ರೈತ ಸಮಾನ ಯೋಜನೆಯ ಸವಲತ್ತು ಪಡೆಯಲು ಪಹಣಿಪತ್ರಕ್ಕಾಗಿ ರೈತರು ಸಾಲುಗಟ್ಟಿ ನಿಲ್ಲುವುದರಿಂದ ಗೊಂದಲ ಉಂಟಾಗಿತ್ತು. ಈ ನಡುವೆ ಕಳೆದೆರಡು ದಿನಗಳಿಂದ ಆಗಾಗ ವಿದ್ಯುತ್ ಮತ್ತು ಸರ್ವರ್ ಕೂಡ ಕೈ ಕೊಡುತ್ತಿರುವುದರಿಂದ ಆರ್‍ಟಿಸಿ ಪಡೆಯಲು ಸಾಧ್ಯವಾಗದೆ ರೈತರು, ಸಾರ್ವಜನಿಕರು ಹಿಡಿಶಾಪ ಹಾಕಿ ವಾಪಾಸಾಗುತ್ತಿದ್ದರು. ಈ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು, ಮಿನಿವಿಧಾನ ಸೌಧಕ್ಕೆ ತೆರಳಿ ನೆಮ್ಮದಿ ಕೇಂದ್ರದಲ್ಲಾಗುತ್ತಿರುವ ಸಮಸ್ಯೆಯನ್ನು ಪರಿಶೀಲಿಸಿದರು.
ರಾಜ್ಯ ಮಟ್ಟದಲ್ಲಿಯೇ ಉಂಟಾಗುವ ಸರ್ವರ್ ಸಮಸ್ಯೆಯ ಕುರಿತು ಮಾಹಿತಿ ಪಡೆದ ಶಾಸಕರು, ನೇರವಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಸಂಪರ್ಕಿಸಿ ಸಾರ್ವಜನಿಕರು, ರೈತರಿಗೆ ಪಹಣಿ ಪಡೆಯಲು ಆಗುತ್ತಿರುವ ಸಮಸ್ಯೆಯನ್ನು ಗಮನ ಸೆಳೆದು ಪರ್ಯಾಯ ವ್ಯವಸ್ಥೆಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನೆಮ್ಮದಿಕೇಂದ್ರಲ್ಲಿ ಆರ್‍ಟಿಸಿ ಮತ್ತಿತರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ಶಾಸಕರಲ್ಲಿ ದೂರಿಕೊಂಡರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸಣ್ಣ ರಂಗಯ್ಯ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ಮೋನಪ್ಪದೇವಸ್ಯ, ಪುರುಷೋತ್ತಮ ಶೆಟ್ಟಿ ವಾಮದಪದವು, ರಾಜಾರಾಮ ನಾಯಕ್, ಗುರುದತ್ತ ನಾಯಕ್ ಬಂಟ್ವಾಳ, ಮಹೇಶ್ ಶೆಟ್ಟಿ ಮೊದಲಾದವರಿದ್ದರು.







