ಆರಾಧನಾ ಯೋಜನೆಯ ಸರಕಾರದ ಅನುದಾನ ದುರುಪಯೋಗ: ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಲು ಆದೇಶ
ಬಂಟ್ವಾಳ, ಫೆ. 28: ಕೇಪು ಗ್ರಾಮದ ಅಡ್ಯನಡ್ಕ ಶ್ರೀ ದುರ್ಗಾಪರಮೇಶ್ವರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರಕ್ಕೆ 2012-13ನೆ ಸಾಲಿನಲ್ಲಿ ಸರಕಾರದ ಆರಾಧನಾ ಯೋಜನೆಯ ಮೂಲಕ ಮಂಜೂರಾದ ಅನುದಾನ 1 ಲಕ್ಷ ರೂ. ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜೆಎಂಎಫ್‍ಸಿ ಕೋರ್ಟ್ ಆದೇಶಿಸಿದೆ.
2012-13ನೆ ಸಾಲಿನಲ್ಲಿ ಭಜನ ಮಂದಿರದ ಅಧ್ಯಕ್ಷರ ಸೀಲನ್ನು ದುರುಪಯೋಗಪಡಿಸಿ, ಸುಳ್ಳು ದಾಖಲೆ ಸೃಷ್ಟಿಸಿದ ತಾಪಂ ಮಾಜಿ ಸದಸ್ಯ ಹರಿಪ್ರಸಾದ್ ಯಾದವ್, 1 ಲಕ್ಷ ರೂ. ಅನುದಾನವನ್ನು ತನ್ನ ಖಾತೆಗೆ ಜಮಾಯಿಸಿಕೊಂಡಿದ್ದನೆಂದು ಕೆ.ಪಿ.ರಾಘವೇಂದ್ರ ರಾವ್ ದೂರು ನೀಡಿದ್ದರು.
ಈ ಬಗ್ಗೆ ವಿಟ್ಲ ಠಾಣಾಧಿಕಾರಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿ, ಆರೋಪಿ ವಿರುದ್ಧ ಅಂತಿಮ ವರದಿ ಸಲ್ಲಿಸಿದ್ದರು. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆ.ಪಿ. ರಾಘವೇಂದ್ರ ರಾವ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಅದರಂತೆ ಬಂಟ್ವಾಳ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಫೆ.19ರಂದು ತೀರ್ಪು ನೀಡಿ, ತನಿಖಾಧಿಕಾರಿಯವರು ಸಲ್ಲಿಸಿರುವ ಬಿ ಅಂತಿಮ ವರದಿಯನ್ನು ತೊಡೆದು ಹಾಕಲಾಗಿದೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 420ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಲಾಗಿದೆ ಹಾಗೂ ಪಿರ್ಯಾದುದಾರರಿಗೆ ಸಮನ್ಸ್ ಹೊರಡಿಸಲು ಆದೇಶಿಸಿದ್ದಾರೆ.







