ಬ್ರಹತ್ ಮೊತ್ತದ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್
ಗೇಲ್ ಹೋರಾಟ ವ್ಯರ್ಥ, ಆದಿಲ್ ಮಿಂಚು

ಬಟ್ಲರ್, ಮೊರ್ಗನ್ ಶತಕ
ಗ್ರೆನೆಡಾ, ಫೆ.28: ಆದಿಲ್ ರಶೀದ್ ಓವರ್‌ವೊಂದರ 5 ಎಸೆತಗಳಲ್ಲಿ ಕಬಳಿಸಿದ 4 ವಿಕೆಟ್‌ಗಳ ನೆರವಿನಿಂದ ಇಂಗ್ಲೆಂಡ್ ತಂಡ ಗರಿಷ್ಠ ಮೊತ್ತ ದಾಖಲಾದ ನಾಲ್ಕನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 29 ರನ್‌ಗಳ ಜಯ ದಾಖಲಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
ಬುಧವಾರ ರಾತ್ರಿ ಕೊನೆಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೆರಿಬಿಯನ್ ನೆಲದಲ್ಲಿಯೇ ಅತ್ಯಂತ ಗರಿಷ್ಠ 6 ವಿಕೆಟ್‌ಗೆ 418 ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ವಿಂಡೀಸ್ ತಂಡಕ್ಕೆ ಗೇಲ್ ಬಿರುಗಾಳಿ ಬ್ಯಾಟಿಂಗ್(162, 97 ಎಸೆತ, 11 ಬೌಂಡರಿ, 14 ಸಿಕ್ಸರ್) ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು. 48ನೇ ಓವರ್‌ವರೆಗೂ ಗೆಲುವಿನ ಕನಸು ಕಂಡಿದ್ದ ವಿಂಡೀಸ್‌ಗೆ ಆ ಬಳಿಕ ಇಂಗ್ಲೆಂಡ್ ಲೆಗ್ ಸ್ಪಿನ್ನರ್ ಆದಿಲ್ ಭಾರೀ ಪೆಟ್ಟು ನೀಡಿದರು. ಈ ಓವರ್‌ನಲ್ಲಿ ಅವರು ಒಟ್ಟು 4 ವಿಕೆಟ್ ಪಡೆದು ವಿಂಡೀಸ್ ಇನಿಂಗ್ಸ್‌ಗೆ ಅಂತ್ಯ ಹಾಡಿದರು. 389 ರನ್‌ಗೆ ಆತಿಥೇಯರು ಗಂಟುಮೂಟೆ ಕಟ್ಟಿದರು. ಇನ್ನೋರ್ವ ಬೌಲರ್ ಮಾರ್ಕ್ ವುಡ್ (60ಕ್ಕೆ 4) ಆದಿಲ್‌ಗೆ ಸಾಥ್ ನೀಡಿದರು. 389 ರನ್ ವೆಸ್ಟ್ ಇಂಡೀಸ್ ಏಕದಿನ ಪಂದ್ಯವೊಂದರಲ್ಲಿ ಗಳಿಸಿದ ಗರಿಷ್ಠ ಮೊತ್ತವೂ ಆಗಿದೆ.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಜೋಸ್ ಬಟ್ಲರ್ (150, 77 ಎಸೆತ, 12 ಸಿಕ್ಸರ್, 13 ಬೌಂಡರಿ) ಹಾಗೂ ನಾಯಕ ಮೊರ್ಗನ್‌ರ (103, 88 ಎಸೆತ, 6 ಸಿಕ್ಸರ್, 8 ಬೌಂಡರಿ) ಭರ್ಜರಿ ಶತಕಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 418 ರನ್ ದಾಖಲಿಸಿತ್ತು.
►24 ಸಿಕ್ಸರ್ ವಿಶ್ವದಾಖೆ: ಇಂಗ್ಲೆಂಡ್ ಈ ಪಂದ್ಯದ ಇನಿಂಗ್ಸ್‌ವೊಂದರಲ್ಲೇ 24 ಸಿಕ್ಸರ್‌ಗಳು ದಾಖಲಾದವು. ಇದೇ ಸರಣಿಯ ಪಂದ್ಯವೊಂದರಲ್ಲಿ ವಿಂಡೀಸ್ 23 ಸಿಕ್ಸರ್ ದಾಖಲಿಸಿದ್ದು ವಿಶ್ವದಾಖಲೆಯಾಗಿತ್ತು.
ಏಕದಿನದಲ್ಲಿ ಗೇಲ್ 10,000 ರನ್
ಇದೇ ಪಂದ್ಯದಲ್ಲಿ 55 ಎಸೆತಗಳಲ್ಲಿ ತಮ್ಮ 25ನೇ ಶತಕ ಸಿಡಿಸಿದ ವೆಸ್ಟ್ ಇಂಡೀಸ್ ಸ್ಫೋಟಕ ದಾಂಡಿಗ ಕ್ರಿಸ್ ಗೇಲ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 500 ಅಂತರ್‌ರಾಷ್ಟ್ರೀಯ ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವದ ಪ್ರಥಮ ಆಟಗಾರ ಎಂಬ ದಾಖಲೆಗೆ ಪಾತ್ರವಾದರು. ಏಕದಿನ ಪಂದ್ಯಗಳಲ್ಲಿ ಒಟ್ಟು 305 ಸಿಕ್ಸರ್ ಸಿಡಿಸಿರುವ ಗೇಲ್, ಪಾಕಿಸ್ತಾನದ ಶಾಹಿದ್ ಆಫ್ರಿದಿಗಿಂತ(351 ಸಿಕ್ಸರ್) ಹಿಂದಿದ್ದಾರೆ. ಇದೇ ವೇಳೆ ಗೇಲ್ ಅಂತರ್‌ರಾಷ್ಟ್ರೀಯ ಏಕದಿನದಲ್ಲಿ 10,000ಕ್ಕಿಂತ ಅಧಿಕ ರನ್ ಪೂರೈಸಿದ ವಿಶ್ವದ 14ನೇ ಹಾಗೂ ವೆಸ್ಟ್ ಇಂಡೀಸ್‌ನ 2ನೇ ದಾಂಡಿಗ ಎನಿಸಿಕೊಂಡರು.







