ಭಾರತಕ್ಕೆ 2-1ರಿಂದ ಸರಣಿ ವಿಜಯ
ತೃತೀಯ ಏಕದಿನ: ಇಂಗ್ಲೆಂಡ್‌ಗೆ ಜಯ

ಮುಂಬೈ, ಫೆ.28: ಸೋಲಿನ ಸುಳಿಯಿಂದ ಪಾರಾದ ಇಂಗ್ಲೆಂಡ್ ಮಹಿಳಾ ತಂಡ ಭಾರತದ ವಿರುದ್ಧ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಗುರುವಾರ 2 ವಿಕೆಟ್‌ಗಳ ಸಮಾಧಾನಕರ ಗೆಲುವು ದಾಖಲಿಸಿದೆ. ಈ ಮೂಲಕ 1-2ರಿಂದ ಸರಣಿಯನ್ನು ಭಾರತಕ್ಕೆ ಒಪ್ಪಿಸಿದ್ದು ವೈಟ್‌ವಾಶ್ ಆಗುವುದರಿಂದ ತಪ್ಪಿಸಿಕೊಂಡಿದೆ.
ಇಲ್ಲಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 206 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ಒಂದು ಹಂತದಲ್ಲಿ 49 ರನ್‌ಗೆ 5 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಆಲ್‌ರೌಂಡರ್ ಡ್ಯಾನ್ನಿ ವ್ಯಾಟ್ (56, 82 ಎಸೆತ) ಅವರು ನಾಯಕಿ ಹೀದರ್ ನೈಟ್(47, 63 ಎಸೆತ) ಹಾಗೂ ಜಾರ್ಜಿಯಾ ಎಲ್ವಿಸ್(ಅಜೇಯ 33, 53 ಎಸೆತ) ಅವರೊಂದಿಗೆ ಎರಡು ಸಮಯೋಚಿತ ಜೊತೆಯಾಟಗಳನ್ನು ಬೆಳೆಸುವ ಮೂಲಕ ತಂಡದ ಗೆಲುವಿಗೆ ಅಗತ್ಯವಿದ್ದ ರನ್‌ಗಳನ್ನು ಜಮೆ ಮಾಡಿದರು.
48.5 ಓವರ್‌ಗಳಲ್ಲ್ಲಿ 208 ರನ್ ಗಳಿಸಿದ ಇಂಗ್ಲೆಂಡ್ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಎರಡು ಅಂಕ ಗಳಿಸಿದೆ. ಭಾರತದ ಪರ ಜುಲನ್ ಗೋಸ್ವಾಮಿ(41ಕ್ಕೆ 3), ದೀಪ್ತಿ ಶರ್ಮಾ(47ಕ್ಕೆ 1), ಶಿಖಾ ಪಾಂಡೆ(34ಕ್ಕೆ 2) ಹಾಗೂ ಪೂನಮ್ ಯಾದವ್(41ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಸ್ಮತಿ ಮಂಧಾನಾ(66, 74 ಎಸೆತ) ಹಾಗೂ ಪೂನಮ್ ರಾವತ್(56, 97 ಎಸೆತ) ಅರ್ಧಶತಕಗಳ ಮೂಲಕ ಉತ್ತಮ ಅಡಿಗಲ್ಲು ಹಾಕಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆತಿಥೇಯ ತಂಡದ ಮಹಿಳೆಯರು ರನ್ ಗಳಿಸಲು ವಿಫಲರಾದರು. ಅಂತಿಮವಾಗಿ ಸ್ಪರ್ಧಾತ್ಮಕ ಮೊತ್ತ ಜಮೆ ಮಾಡುವಲ್ಲಿ ಭಾರತ ಯಶಸ್ವಿಯಾಯಿತು. ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಕ್ಯಾಥರೀನ್ ಬ್ರಂಟ್(28ಕ್ಕೆ 5) ಪ್ರವಾಸಿಗರ ಇನಿಂಗ್ಸ್‌ನಲ್ಲಿ 18 ರನ್‌ಗಳ ಕೊಡುಗೆಯನ್ನೂ ನೀಡಿದ್ದರು. ಸಹಜವಾಗಿಯೇ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. ಸರಣಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಮಿಂಚಿದ ಭಾರತದ ಸ್ಮತಿ ಮಂಧಾನಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.







