ಮೆಕ್ಸಿಕೊ ಓಪನ್: ನಡಾಲ್‌ಗೆ ಸೋಲುಣಿಸಿದ ಕಿರ್ಗಿಯೊಸ್ ಕ್ವಾರ್ಟರ್ ಫೈನಲ್‌ಗೆ

ಅಕಪಲ್ಕೊ, ಫೆ.28: ಅಗ್ರ ಶ್ರೇಯಾಂಕದ ರಫೆಲ್ ನಡಾಲ್‌ರನ್ನು ಮಣಿಸಿದ ಆಸ್ಟ್ರೇಲಿಯದ ನಿಕ್ ಕಿರ್ಗಿ ಯೊಸ್ ಮೆಕ್ಸಿಕೊ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಕಿರ್ಗಿಯೊಸ್ ಮೊದಲ ಸೆಟನ್ನು 3-6 ಅಂತರದಿಂದ ಸೋತಿದ್ದರು. ಆದಾಗ್ಯೂ ತನ್ನ ಹೋರಾಟವನ್ನು ಮುಂದುವರಿಸಿದ ಅವರು 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಆಟಗಾರನನ್ನು 7-6(7/2), 7-6(8/6) ಸೆಟ್‌ಗಳಿಂದ ಮಣಿಸಿ ಶಾಕ್ ನೀಡಿದರು.
2005 ಹಾಗೂ 2013ರಲ್ಲಿ ಮೆಕ್ಸಿಕೆೊ ಓಪನ್ ಪ್ರಶಸ್ತಿ ಜಯಿಸಿರುವ ನಡಾಲ್ ಈ ವರ್ಷ ಆಸ್ಟ್ರೆಲಿಯನ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಸೋತ ಬಳಿಕ ಮೊದಲ ಬಾರಿ ಟೂರ್ನಿಯಲ್ಲಿ ಕಾಣಿಸಿಕೊಂಡರು. ನಡಾಲ್‌ರನ್ನು ಮಣಿಸಿದ ಕಿರ್ಗಿಯೊಸ್ ಹೆಡ್-ಟು-ಹೆಡ್ ದಾಖಲೆಯಲ್ಲಿ 3-3 ರಿಂದ ಸಮಬಲ ಸಾಧಿಸಿದರು. ಕಿರ್ಗಿಯೊಸ್ ಸೆಮಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಮುಂದಿನ ಸುತ್ತಿನಲ್ಲಿ ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸ್ಟಾನ್ ವಾವ್ರಿಂಕರನ್ನು ಎದುರಿಸಲಿದ್ದಾರೆ.
ಮೂರನೇ ಶ್ರೇಯಾಂಕದ ಸ್ವಿಸ್‌ನ ವಾವ್ರಿಂಕ ಅಮೆರಿಕದ ಸ್ಟೀವ್ ಜಾನ್ಸನ್‌ರನ್ನು 7-6(7/5), 6-4 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇದೇ ವೇಳೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಸ್ಲೋಯಾನ್ ಸ್ಟೀಫನ್ಸ್ ಬ್ರೆಝಿಲ್‌ನ ಕ್ವಾಲಿಫೈಯರ್ ಬಿಟ್ರಿಝ್ ಹದಾದ್ ಮೈಯಾ ವಿರುದ್ಧ 3-6, 3-6 ನೇರ ಸೆಟ್‌ಗಳಿಂದ ಸೋತಿದ್ದಾರೆ.
ಬಿಟ್ರಿಝ್ ಏಳು ಬಾರಿ ಪ್ರಯತ್ನದಲ್ಲಿ ಮೊದಲ ಸಲ ಅಗ್ರ-10 ಆಟಗಾರ್ತಿಯ ವಿರುದ್ಧ ಜಯ ಸಾಧಿಸಿದ್ದಾರೆ. 4ನೇ ಶ್ರೇಯಾಂಕದ ಅಮೆರಿಕ ಆಟಗಾರ್ತಿಗೆ ಸೋಲಿನ ಕಹಿ ಉಣಿಸಿರುವ ಬಿಟ್ರಿಝ್ ಮುಂದಿನ ಸುತ್ತಿನಲ್ಲಿ ಚೀನಾದ ವಾಂಟ್ ಯಫಾನ್‌ರನ್ನು ಎದುರಿಸಲಿದ್ದಾರೆ. ವಿಶ್ವದ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯ ಅಝರೆಂಕಾ ಟಟ್‌ಜನಾ ಮರಿಯಾರನ್ನು 6-2, 6-1 ಅಂತರದಿಂದ ಸೋಲಿಸುವುದರೊಂದಿಗೆ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.







