ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು: ಶಾಸಕ ಕೆ.ಶ್ರೀನಿವಾಸಗೌಡ

ಕೋಲಾರ,ಫೆ.28: ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಸುಧಾರಣೆ ಆಗಲು ಸಾಧ್ಯ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಜಿ.ಪಂ ನಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ವರ್ಗದ ಉದ್ದಿಮೆಶೀಲರ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ ಇಂದು ಸರ್ಕಾರಿ ಕೆಲಸಗಳನ್ನು ನಂಬಿಕೂರಲು ಸಾಧ್ಯವಿಲ್ಲ. ಸ್ವಾವಲಂಭಿಗಳಾಗಿ ಬದುಕುವುದೇ ಉತ್ತಮವಾಗಿದೆ. ಸರ್ಕಾರಿ ಕೆಲಸಗಳಿಗಿಂತಲೂ ಹೆಚ್ಚಿನ ಸೌಲಭ್ಯವನ್ನು ಖಾಸಗಿ ಕೆಲಸಗಳಿಂದ ಪಡೆದುಕೊಳ್ಳಬಹುದು ಎಂದರು.
ಆರ್ಥಿಕವಾಗಿ ಹಿಂದುಳಿದ ವರ್ಗಗಳು ಕೈಗಾರಿಕೆಗಳಲ್ಲಿ ತೊಡಗಿಕೊಳ್ಳಲು ಶಿಕ್ಷಣ ಮತ್ತು ಬಂಡವಾಳದ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ದಲಿತ ವರ್ಗಗಳ ಸಮುದಾಯವನ್ನು ಆರ್ಥಿಕವಾಗಿ ಮೇಲೆ ತರಲು ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಈ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ದಿ ಪಡೆಯಬೇಕು ಎಂದು ಅವರು ಕಿವಿ ಮಾತು ಹೇಳಿದರು. ಸರ್ಕಾರ ದಲಿತ ವರ್ಗಗಳ ಆರ್ಥಿಕ ಏಳಿಗೆಗೆ ಯೋಜನೆಗಳನ್ನು ರೂಪಿಸಿದರೂ ಅಂತಹ ಯೋಜನೆಗಳನ್ನು ಮೇಲ್ವರ್ಗದ ಜನ ದಲಿತರ ಹೆಸರಿನಲ್ಲಿ ಪಡೆದುಕೊಂಡಿರುವ ದೂರುಗಳೂ ಬಂದಿವೆ. ಅಂತದ್ದಕ್ಕೆ ಅವಕಾಶ ನೀಡದೆ ಸರ್ಕಾರ ನೀಡಿರುವ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ದಲಿತ ಸಮುದಾಯದವರನ್ನು ಕೈಗಾರಿಕೆಗಳ ಮೂಲಕ ಅಭಿವೃದ್ಧಿ ಪಡಿಸಲು ಸರ್ಕಾರ ಶೇ.50 ಸಹಾಯ ಧನವನ್ನು ಒದಗಿಸುತ್ತಿದೆ. ಅಲ್ಲದೆ ಕೈಗಾರಿಕಾ ಪ್ರಾಂಗಣಗಳಲ್ಲಿ ಕಡಿಮೆ ಹಣಕ್ಕೆ ಭೂಮಿಯನ್ನೂ ಕೊಡುವ ವ್ಯವಸ್ಥೆ ಮಾಡುತ್ತಿದೆ. ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.
ತಾ.ಪಂ.ಅಧ್ಯಕ್ಷ ಸೂಲೂರು ಆಂಜಿನಪ್ಪ ಮಾತನಾಡಿ, ಆಡಳಿತ ವ್ಯವಸ್ಥೆಯಲ್ಲಿ ಇರುವ ಲೋಪಗಳಿಂದಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಗಳು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಿಲ್ಲ. ಈ ಜನಾಂಗಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪಟ್ಟಭದ್ರ ಹಿತಾಸಕ್ತಿಗಳು ಬಿಡುತ್ತಿಲ್ಲ ಎಂದರು. ಪರಿಶಿಷ್ಟರ ಕಲ್ಯಾಣಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳಿಗೂ ಇಚ್ಛಾಸಕ್ತಿ ಇಲ್ಲ. ಅವರಲ್ಲಿ ಬದ್ಧತೆ ಇಲ್ಲದಿರುವುದರಿಂದಾಗಿ ಪರಿಶಿಷ್ಟರಿಗೆ ಸಾಲ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಎಸ್ಸಿ-ಎಸ್ಟಿ ಉದ್ದಿಮೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ದಲಿತ ಸಮುದಾಯಗಳು ಆರ್ಥಿಕವಾಗಿ ಮೇಲೆ ಬರಬೇಕಾದರೆ ಕೈಗಾರಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇಂದು ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಆಗುವುದನ್ನು ನೋಡುತ್ತಿದ್ದೇವೆ. ಸರ್ಕಾರಿ ಕೆಲಸಗಳಿಗಿಂತ ಖಾಸಗಿ ಉದ್ಯಮವನ್ನು ಮಾಡುವ ಮೂಲಕ ನಾಲ್ಕು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಅವಕಾಶವೂ ದೊರೆಯುತ್ತದೆ ಎಂದರು.
ಶೋಷಿತ ಸಮುದಾಯಗಳ ಬೆಳವಣಿಗೆಗೆ ಇಂದು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಈ ಯೋಜನೆಗಳನ್ನು ಬಳಸಿಕೊಂಡು ದಲಿತ ವರ್ಗಗಳು ಆರ್ಥಿಕವಾಗಿ ಸಬಲರಾಗಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸಿದ್ಧಲಿಂಗಪ್ಪ ಬಿ.ಪೂಜಾರಿ, ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಉಮಾಶಂಕರ್, ಜಿಲ್ಲಾ ಇಟ್ಟಿಗೆ ಕಾರ್ಖಾನೆಗಳ ಮಾಲಕರ ಸಂಘದ ಅಧ್ಯಕ್ಷ ಪಿ.ರಾಜಪ್ಪ ಮುಂತಾದವರು ವೇದಿಕೆಯಲ್ಲಿದ್ದರು.







