ಆಜೀವ ನಿಷೇಧ ಪ್ರಶ್ನಿಸಿ ಶ್ರೀಶಾಂತ್ ಅರ್ಜಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ
ಹೊಸದಿಲ್ಲಿ, ಫೆ.28: 2013ರ ಐಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದಲ್ಲಿ ಬಿಸಿಸಿಐ ತನಗೆ ವಿಧಿಸಿರುವ ಆಜೀವ ನಿಷೇಧವನ್ನು ಪ್ರಶ್ನಿಸಿ ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ಸಲ್ಲಿಸಿರುವ ಅರ್ಜಿಯ ಕುರಿತ ತೀರ್ಪನ್ನು ಗುರುವಾರ ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಶ್ರೀಶಾಂತ್ ಭ್ರಷ್ಟಾಚಾರ, ಬೆಟ್ಟಿಂಗ್ ಹಾಗೂ ಕ್ರಿಕೆಟಿಗೆ ಅಗೌರವ ತೋರಿದ ವಿಷಯದಲ್ಲಿ ತಪ್ಪಿತಸ್ಥನಾಗಿ ದ್ದಾರೆ ಎಂದು ಬಿಸಿಸಿಐ ವಾದ ಮಂಡಿಸಿದ್ದು, ಜಸ್ಟಿಸ್ ಅಶೋಕ್ ಭೂಷಣ್ ಹಾಗೂ ಜಸ್ಟಿಸ್ ಕೆ.ಎಂ. ಜೋಸೆಫ್ ಅವರಿದ್ದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದೆ.
ಎರಡು ವಾರಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸುವಂತೆ ಶ್ರೀಶಾಂತ್ ಹಾಗೂ ಬಿಸಿಸಿಐಗೆ ನ್ಯಾಯಾಲಯ ಆದೇಶಿಸಿದೆ. ಭ್ರಷ್ಟಾಚಾರ ಹಾಗೂ ಬೆಟ್ಟಿಂಗ್‌ನಲ್ಲಿ ಭಾಗಿಯಾದರೆ ಅದಕ್ಕೆ ಕ್ರಿಕೆಟ್‌ನಿಂದ ಆಜೀವ ನಿಷೇಧವೇ ಶಿಕ್ಷೆಯಾಗಿದೆ. ಈ ವಿಚಾರದಲ್ಲಿ ಕ್ರಿಕೆಟ್ ಮಂಡಳಿ ಶೂನ್ಯ ಸಹಿಷ್ಣುತೆ ಹೊಂದಿದೆ. ಬುಕ್ಕಿಗಳು ಶ್ರೀಶಾಂತ್‌ರನ್ನು ಸಂಪರ್ಕಿಸಿದಾಗ ಆತ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಗಮನಕ್ಕೆ ತಂದಿರಲಿಲ್ಲ ಎಂದು ಬಿಸಿಸಿಐ ಪರ ಹಿರಿಯ ವಕೀಲ ಪರಾಗ್ ತ್ರಿಪಾಠಿ ನ್ಯಾಯಾಲಯಕ್ಕೆ ತಿಳಿಸಿದರು.







