ಯುದ್ಧ ಮಾಡುವವರು ಸೈನಿಕರೇ ಹೊರತು ನಾವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು: ದೇವೇಗೌಡ

ಹಾಸನ,ಫೆ.28: ಯುದ್ಧ ಮಾಡುವವರು ಸೈನಿಕರೇ ಹೊರತು ನಾವುಗಳಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ಯಾವ ಕಾರಣಕ್ಕೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಪ್ರಧಾನಿ ಹೆಚ್.ಡಿ. ದೇವೇಗೌಡ ಸಲಹೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ಮಾಡುವವರು ಸೈನಿಕರೇ ಹೊರತು ನಾವಲ್ಲ ಎಂಬುದನ್ನು ಮನಗಾಣಬೇಕು. ಅದನ್ನು ಎಂದೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದರು.
ಪಾಕ್ ಗಿಂತ ನಾವು ಎಲ್ಲಾ ರೀತಿಯಿಂದಲೂ ಸಮರ್ಥರಿದ್ದೇವೆ. ಆದರೆ ಅವರಿಗೂ ಸಹಾಯ ಮಾಡುವ ಶಕ್ತಿಗಳಿವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ದೇಶದಲ್ಲಿ ಯುದ್ಧ ಭೀತಿ ಕಾರಣದಿಂದ ಲೋಕಸಭೆ ಚುನಾವಣೆ ಮುಂದಕ್ಕೆ ಹೋಗಲಿದೆ ಎಂದು ನನಗನ್ನಿಸದು. ಆದರೆ ಕಾಶ್ಮೀರ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದರು.
ಪಾಕ್ ಉಗ್ರರ ಮೇಲೆ ವೈಮಾನಿಕ ದಾಳಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ನನ್ನಿಂದಲೇ ಆಯಿತು ಎಂಬಂತೆ ನಡೆದು ಕೊಳ್ಳುತ್ತಿದ್ದಾರೆ. ಮೋದಿಯವರಿಗೆ ದೇಶದ ಜನತೆ 282 ಸ್ಥಾನ ಕೊಟ್ಟಿದ್ದಾರೆ. ದೇಶದ ಆಡಳಿತ ಅವರ ಕೈಯಲ್ಲೇ ಇದೆ. ಆದರೂ ದೇಶದ ಮುಕುಟ ಎನಿಸಿಕೊಂಡಿರುವ ಜಮ್ಮು-ಕಾಶ್ಮೀರದಲ್ಲಿ ಈಗಲೂ ಕೆಟ್ಟ ಪರಿಸ್ಥಿತಿ ಇದ್ದು, ಇದಕ್ಕೆ ಏನು ಕಾರಣ ಎಂಬುದನ್ನು ಅವರೇ ಹೇಳಬೇಕು ಎಂದು ಹೇಳಿದರು.
ನಾನು ಪ್ರಧಾನಿಯಾಗಿದ್ದಾಗ ಸೈನಿಕ ಅಧಿಕಾರಿಗಳನ್ನು ಧಿಕ್ಕರಿಸಿ ಕಾಶ್ಮೀರಕ್ಕೆ ಹೋಗಿ ಬಂದಿದ್ದೆನು. ಒಟ್ಟಾರೆ ದೇಶ ಸಂಕಷ್ಟದಲ್ಲಿದ್ದು, ಈ ವೇಳೆ ನಾವೆಲ್ಲರೂ ಪ್ರಧಾನಿ ಜೊತೆ ನಿಲ್ಲಬೇಕು ಎಂದ ಗೌಡರು, ಎಲ್ಲೋ ಒಂದು ಕಡೆ ಐಕ್ಯತೆ ತೋರಿಸುವಲ್ಲಿ ನಾವು ಮುಗ್ಗರಿಸುತ್ತಿದ್ದೇವೆ ಎಂಬ ಆತಂಕ ನನ್ನದು. ನಮ್ಮ ಓರ್ವ ಪೈಲಟ್ ಪಾಕ್ ವಶದಲ್ಲಿದ್ದಾನೆ. ಆ ಬಗ್ಗೆ ಭಾರತೀಯರ ಮನಸ್ಸಿನಲ್ಲಿ ನೋವಿದೆ. ನಮ್ಮ ಯೋಧರು ನಡೆಸಿದ ವೈಮಾನಿಕ ದಾಳಿ ಬಗ್ಗೆ ನಮಗೆ ಹೆಮ್ಮೆ ಇದೆ. ಇದಕ್ಕೆ ನಾವೆಲ್ಲರೂ ಗೌರವ ಕೊಡಬೇಕು. ಅದನ್ನು ಬಿಟ್ಟು ಎಲ್ಲವೂ ನನ್ನ ಸಾಧನೆ ಎಂದು ಬೀಗುವುದು, ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ನೇರವಾಗಿ ಮೋದಿ ವಿರುದ್ಧ ಕಿಡಿಕಾರಿದರು.
ಪ್ರಧಾನಿ ಅವರಿಗೆ ವಿಪಕ್ಷದವರ ಮೇಲೆ, ಅದರಲ್ಲೂ ಕಾಂಗ್ರೆಸ್ ಮೇಲೆ ಸಿಟ್ಟಿದೆ. ನಿರ್ಲಕ್ಷ್ಯ ಮನೋಭಾವನೆ ಇದೆ. ಇಂಥ ಮನಸ್ಥಿತಿ ಸರಿಯಲ್ಲ. ಈ ಸಂದರ್ಭದಲ್ಲಿ ಟೀಕೆ-ಟಿಪ್ಪಣಿ ಬಿಟ್ಟು ನಾವೆಲ್ಲರೂ ಒಗ್ಗಟ್ಟು ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವ ಬಗ್ಗೆ ಗೌಪ್ಯವಾಗಿ ಇಟ್ಟ ದೇವೇಗೌಡರು, ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೋ? ಇಲ್ಲವೋ? ಎಂಬುದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಹಾಸನ-ರಾಮನಗರ ಜಿಲ್ಲೆಯ ಜನ ನನ್ನನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಅದರಲ್ಲಿ ಹಾಸನ ಜನರ ಪಾಲು ಹೆಚ್ಚು ಇದೆ. ಇದಕ್ಕಾಗಿ ನಾನು ಆ ಜನರಿಗೆ ಆಭಾರಿ ಎಂದರು. ಪ್ರಜ್ವಲ್ ರೇವಣ್ಣ ನನ್ನ ಉತ್ತರಾಧಿಕಾರಿ ಎಂದು ಈ ಹಿಂದೆ ಹೇಳಿದ್ದ ಮಾತಿಗೆ ಪ್ರತಿಕ್ರಿಯಿಸಿದ ದೇವೇಗೌಡರು, ಇದು ಯುವಕರ ಕಾಲ. ಪ್ರಸ್ತುತ ಲೋಕಸಭೆಯಲ್ಲಿ ಹೆಚ್ಚು ಮಂದಿ ಯುವಕರಿದ್ದಾರೆ ಎಂದಷ್ಟೇ ಹೇಳಿ ನಗೆ ಬೀರಿದರು.







