ಬಾಲಾಕೋಟ್ ವಾಯುದಾಳಿಯ ವಿವರವನ್ನು ಬಹಿರಂಗಪಡಿಸಲೇಬೇಕು: ಮಮತಾ ಬ್ಯಾನರ್ಜಿ
"ಏರ್‌ಸ್ಟ್ರೈಕ್‌ನಲ್ಲಿ ಎಷ್ಟು ಮಂದಿ ಸತ್ತಿದ್ದಾರೆಂದು ತಿಳಿದುಕೊಳ್ಳುವ ಹಕ್ಕು ನಮಗಿದೆ"

ಕೋಲ್ಕತಾ, ಮಾ.1: ಜೈಶ್-ಇ-ಮುಹಮ್ಮದ್ ಉಗ್ರ ಸಂಘಟನೆಯ ಅಡಗುತಾಣ ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತದ ವಾಯು ಸೇನೆ ನಡೆಸಿರುವ ದಾಳಿಯ ಕುರಿತು ವಿವರವನ್ನು ಬಹಿರಂಗಪಡಿಸಲೇಬೇಕು. ರಾಜಕೀಯ ನಿರ್ಬಂಧದ ಹಿನ್ನೆಲೆಯಲ್ಲಿ ಉಭಯ ದೇಶಗಳ ಮಧ್ಯೆ ಯುದ್ಧ ನಡೆಯಬಾರದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
‘‘ಏರ್‌ಸ್ಟ್ರೈಕ್‌ನಲ್ಲಿ ಎಷ್ಟು ಮಂದಿ ಸತ್ತಿದ್ದಾರೆಂಬ ತಿಳಿದುಕೊಳ್ಳುವ ಹಕ್ಕು ನಮಗಿದೆ. ಸತ್ತವರು ಯಾರು. ನಿಜವಾದ ಘಟನೆಯನ್ನು ತಿಳಿದುಕೊಳ್ಳಲು ನಾವು ಬಯಸಿದ್ದೇವೆ. ನಾವು ಈ ತನಕ ವಿವರವನ್ನು ಪಡೆದಿಲ್ಲ. ನಾವು ದೇಶವನ್ನು ಪ್ರೀತಿಸುತ್ತೇವೆ. ಆದರೆ, ಯೋಧರ ಮೃತದೇಹದ ಮೇಲೆ ರಾಜಕೀಯ ಮಾಡುವುದನ್ನು ನಾವು ಇಷ್ಟಪಡುವುದಿಲ್ಲ’’ ಎಂದು ವರದಿಗಾರರಿಗೆ ಮಮತಾ ತಿಳಿಸಿದ್ದಾರೆ.
ಉರಿ ಹಾಗೂ ಪಠಾಣ್‌ಕೋಟ್‌ನಲ್ಲಿ ಉಗ್ರರ ದಾಳಿ ನಡೆದರೂ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದಾಳಿಯ ಬಗ್ಗೆ ಸರಕಾರ ಗುಪ್ತಚರ ಮಾಹಿತಿ ಪಡೆದಿತ್ತು. ಆದರೆ, ಯಾವುದೇ ಮುನ್ನಚ್ಚರಿಕಾ ಕ್ರಮ ತೆಗೆದುಕೊಂಡಿರಲಿಲ್ಲ. ಅವರು(ಯೋಧರು)ತಮ್ಮ ಪ್ರಾಣಬಿಟ್ಟಿದ್ದಾರೆ’’ ಎಂದು ಮಮತಾ ಹೇಳಿದ್ದಾರೆ.
ಮುಖ್ಯಮಂತ್ರಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ, ‘‘ಬ್ಯಾನರ್ಜಿ ಇಂತಹ ಹೇಳಿಕೆ ಮೂಲಕ ತಮ್ಮ ಸ್ಥಾನಕ್ಕೆ ಅಗೌರವ ತೋರಿದ್ದಾರೆ. ಭಾರತೀಯ ವಾಯು ಪಡೆಯ ಸರ್ಜಿಕಲ್ ಸ್ಟ್ರೈಕ್‌ನ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಪಾಕಿಸ್ತಾನದ ಉಗ್ರರ ಚಟುವಟಿಕೆಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಈ ರೀತಿಯ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ’’ಎಂದು ಸಿನ್ಹಾ ಹೇಳಿದ್ದಾರೆ.







