ಮಂಗಳೂರು: ಸಾಧಕ ಕಾರ್ಮಿಕರಿಗೆ ಸಮ್ಮಾನ ಪ್ರಶಸ್ತಿ, ಸನ್ಮಾನ

ಮಂಗಳೂರು, ಮಾ.1: ದ.ಕ. ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಶ್ರಯದಲ್ಲಿ ಇಂದು ಕಾರ್ಮಿಕ ವರ್ಗದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 13 ಮಂದಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ರವರು, ಸಾಧಕರಾದ ಸುಜಾತ ಜೋಗಿ, ಬಾಬು ಮೂಲ್ಯ, ಪದ್ಮನಾಭ, ರಾಘವ ಆಚಾರಿ, ದೇವೇಂದ್ರ ನಾಕ್, ಸೋಮಣ್ಣ ಆಚಾರಿ, ಜಯಂತಿ, ಚಂದ್ರಹಾಸ, ಫ್ರಾನ್ಸಿಸ್, ಪ್ರವೀಣ್, ಸಿ.ಕೆ. ಅಶೋಕ್ ಕುಮಾರ್, ಸುಧಾಕರ್, ಕೃಷ್ಣಪ್ಪ ಅವರಿಗೆ ತಲಾ 10000 ರೂ. ನಗದಿನೊಂದಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ವಿವಿಧ ವಿಭಾಗಗಳಲ್ಲಿ 170 ಮಂದಿ ಸಾಧಕರಿಗೆ ತಲಾ 1000 ನಗದಿನೊಂದಿಗೆ ನ್ಮಾನವನ್ನು ನೆರವೇರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್, ಸರಕಾರದಿಂದ ನೀಡಲಾಗುವ ಸೌಲಭ್ಯ, ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾದಾಗ ಪ್ರಗತಿ ಸಾಧ್ಯ ಎಂದರು.
ರಾಜ್ಯದ ಸಂಪತ್ತಿನಲ್ಲಿ ಸರ್ವರಿಗೂ ಹಕ್ಕಿರುವುದರಿಂದ ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಈ ಮೂಲಕ ಎಲ್ಲರಿಗೂ ಸ್ವಾಭಿಮಾನದ ಬದುಕನ್ನು ಒದಗಿಸುವ ಕೆಲಸವಾಗುತ್ತಿದೆ. ಕಾರ್ಮಿಕ ಇಲಾಖೆಯು ಬಡ ವರ್ಗದ ಕಾರ್ಮಿಕರ ಉನ್ನತಿಗಾಗಿ ಕಾಳಜಿಯಿಂದ ಕೆಲಸ ನಿರ್ವಹಿಸಬೇಕು ಎಂದು ಅವರು ಈ ಸಂದರ್ಭ ಹೇಳಿದರು.
ವೇದಿಕೆಯಲ್ಲಿ ವಿವಿಧ ಕಾರ್ಮಿಕ ವರ್ಗಗಳ ಮುಖಂಡರಾದ ವಿಶ್ವನಾಥ ಶೆಟ್ಟಿ, ಪ್ರಜ್ವಲ್, ಇಮ್ತಿಯಾಝ್, ಶಂಶದ್, ಆನಂದ್, ಭಾಸ್ಕರ ಮಡಿವಾಳ, ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಝಬೆತ್ ತಾವ್ರೊ ಸ್ವಾಗತಿಸಿದರು.

















