ಪೈಲಟ್ ಅಭಿನಂದನ್ ರ ತಾಯಿಯ ಶೌರ್ಯದ ಕತೆ ಕೇಳಿದರೆ ಬೆರಗಾಗುವಿರಿ
ತಾಯಿಗೆ ತಕ್ಕ ಮಗ ಈಗ ದೇಶದ ಕಣ್ಮಣಿ

ಹೊಸದಿಲ್ಲಿ, ಮಾ.1: ದೇಶಕ್ಕೆ ದೇಶವೇ ಭಾರತೀಯ ವಾಯುಪಡೆಯ ಪೈಲಟ್, ಪಾಕ್ ವಶದಲ್ಲಿರುವ ಹಾಗೂ ಇಂದು ಬಿಡುಗಡೆಗೊಳ್ಳಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಶೌರ್ಯ ಹಾಗೂ ಸಾಹಸವನ್ನು ಕೊಂಡಾಡುತ್ತಿದೆ. ಅವರ ಈ ಕೆಚ್ಚೆದೆ ಹಾಗೂ ಅವರ ದಿಟ್ಟತನ ತಾಯಿಯಿಂದಲೇ ಅವರಿಗೆ ಬಳುವಳಿಯಾಗಿ ಬಂದಿದೆ ಎಂಬುದು ಪ್ರಾಯಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಅಭಿನಂದನ್ ಅವರ ತಾಯಿ ಡಾ. ಶೋಭಾ ವರ್ತಮಾನ್ ಅವರು ಲೈಬೀರಿಯಾ, ಇರಾಕ್, ಐವರಿ ಕೋಸ್ಟ್, ಹೈಟಿ, ಲಾವೋಸ್, ಪಾಪುವಾ ನ್ಯೂ ಗಿನಿ ಸಹಿತ ಹಲವಾರು ಹಿಂಸಾತ್ಮಕ, ಸಂಘರ್ಷಮಯ ವಲಯಗಳಲ್ಲಿ ಮಾನವೀಯ ಕೈಂಕರ್ಯ ಕೈಗೊಂಡು ಗಾಯಾಳುಗಳಿಗೆ ಹಾಗೂ ರೋಗಿಗಳನ್ನು ಉಪಚರಿಸಿ ಆರೈಕೆ ಮಾಡಿದವರಾಗಿದ್ದಾರೆ.
ತಮ್ಮ ಮಗನಲ್ಲಿ ಉದಾತ್ತ ಗುಣಗಳನ್ನು ಬೆಳೆಸುವ ಜತೆ ಜತೆಗೆ ಡಾ. ಶೋಭಾ ಹಲವಾರು ಸಂಘರ್ಷಮಯ ವಲಯಗಳಲ್ಲಿ ತಾಯಂದಿರು ಪ್ರಸವಾನಂತರ ಸಮಸ್ಯೆಗಳಿಂದ ತೊಂದರೆಗೊಳಗಾಗದಂತೆ ಶ್ರಮಿಸಿದ್ದಾರಲ್ಲದೆ, ಜಗತ್ತಿನಾದ್ಯಂತ ನೂರಾರು ಮಕ್ಕಳ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.
ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ವೈದ್ಯಕೀಯ ಪದವಿ ಪಡೆದ ಅವರು ರಾಯಲ್ ಕಾಲೇಜ್ ಆಫ್ ಸರ್ಜನ್ಸ್, ಇಂಗ್ಲೆಂಡ್ ಇಲ್ಲಿ ಅನೆಸ್ತೀಸಿಯಾಲಜಿಯಲ್ಲಿ ಸ್ನಾತ್ತಕೋತ್ತರ ಪದವಿ ಪಡೆದವರಾಗಿದ್ದಾರೆ. ಮೆಡಿಸಿನ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ ಅರ್ಥಾತ್ ಡಾಕ್ಟರ್ಸ್ ವಿದೌಟ್ ಬೌಂಡರೀಸ್ ಸದಸ್ಯೆಯಾಗಿ ವಿಶ್ವದಾದ್ಯಂತ ಹಲವೆಡೆ ತಮ್ಮ ವೈದ್ಯಕೀಯ ಸೇವೆಯನ್ನು ಅವರು ಲ್ಲಿಸಿದ್ದಾರೆ.
ಕೇವಲ ಎಕೆ-47 ಮತ್ತು ತಲವಾರುಗಳೇ ಆಳುತ್ತಿದ್ದ ಐವರಿ ಕೋಸ್ಟ್ ನ ಉತ್ತರ ಪ್ರಾಂತ್ಯದಲ್ಲಿ ಆಕೆ 2005ರಲ್ಲಿ ಸೇವೆ ಸಲ್ಲಿಸಿದ್ದರೆ, ಮುಂದೆ ನಾಗರಿಕ ಯುದ್ಧದಿಂದ ಕಂಗೆಟ್ಟಿದ್ದ ಲೈಬೀರಿಯಾದಲ್ಲಿ ಸೇವೆ ಸಲ್ಲಿಸುವ ಅವಕಾಶ ಅವರಿಗೆ ಒದಗಿ ಬಂದಿತ್ತು.
ಸಂಘರ್ಷಗಳ ತವರೂರಾಗಿದ್ದ ನೈಜೀರಿಯಾದ ದಕ್ಷಿಣದಲ್ಲಿರುವ ಪೋರ್ಟ್ ಹರ್ಕೋರ್ಟ್ ಎಂಬಲ್ಲಿಯೂ ಅವರು ಸೇವೆ ಸಲ್ಲಿಸಿ ಅಲ್ಲಿ ತುರ್ತು ಚಿಕಿತ್ಸೆಗಾಗಿ ಒಂದು ಘಟಕವನ್ನೂ ತೆರೆದಿದ್ದರು. ಗ್ರಾಮಸ್ಥರು ಮತ್ತು ತೈಲ ಕಂಪೆನಿಗಳ ನಡುವೆ ಇಲ್ಲಿ ಸಂಘರ್ಷ ಸಾಮಾನ್ಯವಾಗಿತ್ತು.
ಎರಡನೇ ಗಲ್ಫ್ ಯುದ್ಧದ ಸಂದರ್ಭ ಇರಾಕ್ ದೇಶದ ಸುಲೇಮಾನಿಯಾಹ್ ಎಂಬಲ್ಲಿ ಸೇವೆ ಸಲ್ಲಿಸಿದ್ದ ಶೋಭಾ ಅಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಾಗ ಬಚಾವಾಗಿದ್ದರು. ತಮ್ಮ ರೋಗಿಗಳಿಗೆ ಪ್ರಾಣಾಯಾಮವನ್ನೂ ಅವರು ಕಲಿಸಿದ್ದರು.
ಇರಾನ್-ಇರಾಕ್ ಗಡಿ ಪ್ರದೇಶದಲ್ಲಿ ಎಂಎಸ್‍ಎಫ್ ವೈದ್ಯಕೀಯ ನಿರ್ದೇಶಕಿಯಾಗಿಯೂ ಆಕೆ ಸೇವೆ ಸಲ್ಲಿಸಿದ್ದರು. ಮುಂದೆ 2009ರಲ್ಲಿ ಪಾಪುವಾ ನ್ಯೂ ಗಿನಿಯಲ್ಲಿ ಸೇವೆ ಸಲ್ಲಿಸುವಾಗ ಅವರು ಲೈಂಗಿಕ ಹಿಂಸೆಯ ಸಂತ್ರಸ್ತೆಯರು, ಎಚ್‍ಐವಿ ಪೀಡಿತರು ಹಾಗೂ ಲೈಂಗಿಕ ಕಾಯಿಲೆಗಳಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಿದ್ದರು.
2010ರಲ್ಲಿ ಹೈಟಿಯಲ್ಲಿ ಭೂಕಂಪ ಸಂಭವಿಸಿದ ನಂತರ ನೂರಾರು ಮಂದಿ ಗಾಯಾಳುಗಳಿಗೆ ಆಕೆ ಚಿಕಿತ್ಸೆ ಒದಗಿಸಿ ಹಲವರಿಗೆ ಸ್ಫೂರ್ತಿಯ ಸೆಲೆ ಹಾಗೂ ಆಶಾಕಿರಣವಾಗಿದ್ದರು.







