ದೇಶವೇ ಅಭಿನಂದನ್ ರಿಗೆ ಕಾಯುವಾಗ ಚಿತ್ರದ ಪ್ರಮೋಷನ್ ಮಾಡಿದ ಅಕ್ಷಯ್ ಕುಮಾರ್: ಟ್ವಿಟರಿಗರ ಆಕ್ರೋಶ

ಹೊಸದಿಲ್ಲಿ, ಮಾ. 1 : ತಮ್ಮ ಮುಂಬರುವ ಚಿತ್ರ 'ಕೇಸರಿ' ಬಿಡುಗಡೆಗೆ ಸಜ್ಜಾಗುತ್ತಿರುವ ನಟ ಅಕ್ಷಯ್ ಕುಮಾರ್ ಹಾಗೂ ಚಿತ್ರ ನಿರ್ಮಾಪಕ ಕರಣ್ ಜೋಹರ್ ಆ ಚಿತ್ರದ ಮೊದಲ ಹಾಡು 'ಸಾನು ಕೆಹೆಂದಿ'ಯನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿರುವುದು ಸಾಮಾಜಿಕ ಜಾಲತಾಣಿಗರಿಗೆ ಖುಷಿ ನೀಡಿಲ್ಲ.
ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆಯೆ ವಾತಾವರಣವಿರುವ ಇಂತಹ ಸಂದರ್ಭದಲ್ಲಿ, ದೇಶವೇ ವಾಯುಪಡೆಯ ಪೈಲಟ್ ಅಭಿನಂದನ್ ರಿಗೆ ಕಾಯುತ್ತಿರುವಾಗ ತಮ್ಮ ಚಿತ್ರ ಹಾಗೂ ಹಾಡನ್ನು ಪ್ರಮೋಟ್ ಮಾಡುತ್ತಿರುವ ಇಬ್ಬರನ್ನೂ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
''ಇದು ಇಂತಹ ಟ್ವೀಟ್ ಗೆ ಸರಿಯಾದ ಸಮಯವಲ್ಲ. ಇಡೀ ದೇಶವೇ ಒತ್ತಡದಲ್ಲಿರುವಾಗ ಅವರಿಗೆ ತಮ್ಮ ಚಿತ್ರ ಪ್ರಮೋಷನ್ ಅನ್ನು ಒಂದು ದಿನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೇ ?'' ಎಂದು ಕೆಲವರು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ.
ಚಿತ್ರದಲ್ಲಿ ಅಕ್ಷಯ್ ಕುಮಾರ್ ಹವೀಲ್ದಾರ್ ಇಶಾರ್ ಸಿಂಗ್ ಪಾತ್ರದಲ್ಲಿ ಕಾಣಿಸುತ್ತಿದಾರೆ. ಸಾರಾಗರ್ಹಿ ಯುದ್ಧದಲ್ಲಿ ಸಿಖ್ ರನ್ನು ಮುನ್ನಡೆಸಿದವರು ಇಶಾರ್ ಸಿಂಗ್ ಆಗಿದ್ದು 10,000 ಅಫ್ಘಾನ್ ಸೈನಿಕರೆದುರು ಕೆಚ್ಚೆದೆಯಿಂದ ಹೋರಾಡಿದವರಾಗಿದ್ದಾರೆ.
ಪರಿಣೀತಿ ಚೋಪ್ರಾ ಈ ಚಿತ್ರದ ನಾಯಕ ನಟಿಯಾಗಿದ್ದು ಚಿತ್ರ ಮಾ. 21ರಂದು ಬಿಡುಗಡೆಗೊಳ್ಳಲಿದೆ.








