‘ಸುಳ್ಳು ಆಶ್ವಾಸನೆ ನೀಡಿದ’ ಮೋದಿ ವಿರುದ್ಧ ದೇಶಾದ್ಯಂತ ನರೇಗಾ ಕಾರ್ಮಿಕರಿಂದ ದೂರು
ಎಫ್ಐಆರ್ ದಾಖಲಿಸಲು ನಿರಾಕರಿಸಿದ ಪೊಲೀಸರು

ಹೊಸದಿಲ್ಲಿ, ಮಾ.1: ‘ಸುಳ್ಳು ಭರವಸೆಗಳನ್ನು ನೀಡಿದ್ದಕ್ಕಾಗಿ ಮತ್ತು ಸಮಯಕ್ಕೆ ಸರಿಯಾಗಿ ವೇತನ ನೀಡದೆ ಕಾರ್ಮಿಕರನ್ನು ವಂಚಿಸಿದ್ದಕ್ಕಾಗಿ' ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಫ್‍ಐಆರ್ ದಾಖಲಿಸಲು ದೇಶಾದ್ಯಂತ ಸಾವಿರಾರು ನರೇಗಾ ಕಾರ್ಮಿಕರು ಮುಂದಾಗಿದ್ದಾರೆ. ದೇಶದ ವಿವಿಧೆಡೆಗಳ ಸುಮಾರು 150 ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವ ಯತ್ನ ನಡೆದರೂ ಪೊಲೀಸರು ಯಾವುದೇ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಲ್ಲ. ಕೆಲ ಠಾಣೆಗಳಲ್ಲಿ ದೂರು ಸ್ವೀಕರಿಸಿ `ತನಿಖೆ'ಯ ಭರವಸೆ ನೀಡಲಾಯಿತು.
ಸಾಕಷ್ಟು ಕೆಲಸ ಒದಗಿಸದೆ ಹಾಗೂ ವೇತನ ನೀಡುವಲ್ಲಿ ವಿಳಂಬಿಸಿ ಸರಕಾರ ಕಾನೂನು ಉಲ್ಲಂಘಿಸಿದೆ ಎಂದು ನರೇಗಾ ಕಾರ್ಮಿಕರು ಆರೋಪಿಸುತ್ತಿದ್ದಾರೆ. ಸರಕಾರದ ನಾಯಕರಾಗಿರುವ ಮೋದಿ ಈ ನಿಟ್ಟಿನಲ್ಲಿ ‘ಮುಖ್ಯ ಉಲ್ಲಂಘಕ'ರಾಗಿದ್ದಾರೆ ಎಂಬ ಆರೋಪವೂ ಕಾರ್ಮಿಕರಿಂದ ಕೇಳಿ ಬಂದಿದ್ದು, ಇದೇ ಕಾರಣ ನೀಡಿ ಮೋದಿ ವಿರುದ್ಧ ಐಪಿಸಿಯ ಸೆಕ್ಷನ್ 116 ಹಾಗೂ 420 ಅನ್ವಯ ಪ್ರಕರಣ ದಾಖಲಿಸಬೇಕೆಂದು ಅವರು ಕೋರಿದ್ದಾರೆ.
ಸರಕಾರ ಈ ಯೋಜನೆಯಡಿ ಸಾಕಷ್ಟು ಹಣಕಾಸು ಒದಗಿಸಿಲ್ಲ ಹಾಗೂ ಹೆಚ್ಚುವರಿ ಹಣಕಾಸು ಒದಗಿಸುವಂತೆ ಮುಂದಿಟ್ಟಿರುವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ಮನ್ ರೇಗಾ ಸಂಘರ್ಷ ಮೋರ್ಚಾ ಆರೋಪಿಸಿದೆ.
ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ನರೇಗಾ ಅಡಿಯಲ್ಲಿ ಸರಕಾರ ರೂ 60,000 ಕೋಟಿ ಮೀಸಲಿರಿಸಿದ್ದರೆ, ಕಳೆದ ಬಾರಿ ಆರಂಭದಲ್ಲಿ ರೂ 55,000 ಕೋಟಿ ಮೀಸಲಿರಿಸಿದ್ದರೂ, ನಂತರ ಮೊದಲ ಮೂರು ತಿಂಗಳಲ್ಲೇ ಎಲ್ಲಾ ಹಣ ಖರ್ಚಾದ ಹಿನ್ನೆಲೆಯಲ್ಲಿ ಮತ್ತೆ ರೂ 6,084 ಕೋಟಿ ಒದಗಿಸಿದ್ದರಿಂದ ಒಟ್ಟು ರೂ 61,084 ಕೋಟಿ ದೊರಕಿದಂತಾಗಿತ್ತು.







