ಮಂಗಳೂರು: ಸರಕಾರಿ ಸವಲತ್ತುಗಳ ಮಾಹಿತಿ ನೀಡುವ ಕಿಯೋಸ್ಕ್ ಹೆಲ್ಪ್ ಡೆಸ್ಕ್ ಗೆ ಚಾಲನೆ

ಉಳ್ಳಾಲ, ಮಾ. 1: ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (ಡಿಕೆಎಂಒ) ರಿಯಾದ್ ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಸಾರ್ವಜನಿಕರಿಗೆ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲು ತೆರೆಯಲಾದ ಕಿಯೋಸ್ಕ್ ಹೆಲ್ಪ್ ಡೆಸ್ಕ್ ಗೆ ಉಳ್ಳಾಲ ದರ್ಗಾ ವಠಾರದಲ್ಲಿ ಚಾಲನೆ ನೀಡಲಾಯಿತು.
ಕಿಯೋಸ್ಕ್ ಹೆಲ್ಪ್ ಡೆಸ್ಕ್ ಉದ್ಘಾಟಿಸಿ ಮಾತನಾಡಿದ ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ “ಸರಕಾರದಿಂದ ಅನೇಕ ಸವಲತ್ತು ಗಳಿದ್ದರೂ ಮಾಹಿತಿಯ ಕೊರತೆಯಿಂದ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಲಭ್ಯ ಸವಲತ್ತುಗಳ ಬಗ್ಗೆ ಮಾಹಿತಿಯಿಲ್ಲದೆ ಬಡ ರೋಗಿಗಳು ಬಿಲ್ ಪಾವತಿಸಲು ಸಹಾಯಕ್ಕಾಗಿ ಕೈಚಾಚುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸರಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ದೊರಕಿಸಿಕೊಡುವುದು ಪುಣ್ಯದ ಕೆಲಸ” ಎಂದರು.
ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಸಮಿತಿಯ ಉಪಾಧ್ಯಕ್ಷರುಗಳಾದ ಯು.ಕೆ. ಮೋನು ಇಸ್ಮಾಯಿಲ್, ಹಾಜಿ ಬಾವಾ ಮುಹಮ್ಮದ್, ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್, ಸದಸ್ಯರುಗಳಾದ ಹಸನಬ್ಬ, ಕೆ.ಪಿ. ಮುಹಮ್ಮದ್ ನಝೀರ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹಾಜಿ ಎ.ಕೆ. ಮೊಯ್ದಿನ್, ಕೋಶಾಧಿಕಾರಿ ಜೆ ಅಬ್ದುಲ್ ಹಮೀದ್, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎ.ಎ. ಖಾದರ್ ಮೊದಲಾದವರು ಉಪಸ್ಥಿತರಿದ್ದರು.
ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (ಡಿಕೆಎಂಒ) ರಿಯಾದ್ ಇದರ ಅಧ್ಯಕ್ಷ ಅಬ್ದುಲ್ ಅಝೀಝ್ ಬಜ್ಪೆ ಪ್ರಸ್ತಾವನೆಗೈದರು. ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ಸ್ವಾಗತಿಸಿದರು. ಟಿಆರ್ಎಫ್ ಸದಸ್ಯ ನಕಾಶ್ ಬಾಂಬಿಲ ವಂದಿಸಿದರು. ಯೋಜನೆಯ ಉಸ್ತುವಾರಿ ಶಹೀದ್ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಸರಕಾರದ ಪ್ರಮುಖ ಸವಲತ್ತುಗಳಾದ ಆಯುಷ್ ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ, ರಾಜ್ಯ ವಕ್ಫ್ ಮಹಿಳಾ ಪ್ರತಿಷ್ಠಾನದ ಸವಲತ್ತುಗಳು, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಮನಸ್ವಿನಿ ಯೋಜನೆ, ಮಾತೃಶ್ರೀ ಯೋಜನೆ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಮೊದಲಾದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಅರ್ಜಿ ನಮೂನೆಗಳನ್ನು ಹಾಗೂ ಅವನ್ನು ಪಡೆಯಲು ಅಗತ್ಯ ಸಹಕಾರವನ್ನು ನೀಡಲಾಗುವುದು.
ದ.ಕ. ಜಿಲ್ಲೆಯ ಮಸೀದಿಗಳ ವಠಾರದಲ್ಲಿ ಪ್ರತಿ ಶುಕ್ರವಾರ ಮತ್ತು ಸೋಮವಾರದಂದು ಕಿಯೋಸ್ಕ್ ಸಹಾಯ ಕೇಂದ್ರ ಕಾರ್ಯಾಚರಿಸಲಿದೆ. ಆಸಕ್ತ ಮಸೀದಿಯ ಆಡಳಿತ ಸಮಿತಿಯವರು ಯೋಜನೆಯ ಉಸ್ತುವಾರಿ ಶಹೀದ್ ಮೆಲ್ಕಾರ್ ಅರವರನ್ನು ಸಂಪರ್ಕಿಸಿ ಇದರ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9731436565 ಕರೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.












