ಉಡುಪಿ: ಮಾ. 2-3ರಂದು ಮತದಾರರ ಪಟ್ಟಿಗೆ ಹೆಸರು ಸೇರಿಸುವ ‘ಮಿಂಚಿನ ನೋಂದಣಿ’ ವಿಶೇಷ ಅಭಿಯಾನ

ಉಡುಪಿ, ಮಾ.1: ಲೋಕಸಭಾ ಚುನಾವಣೆ 2019ರ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುವ ‘ಮಿಂಚಿನ ನೋಂದಣಿ’ ವಿಶೇಷ ಅಭಿ ಯಾನವನ್ನು ಮಾ. 2 ಮತ್ತು 3ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ನಿಮ್ಮ ಹೆಸರು ಮತ್ತು ವಿವರಗಳು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಇಲ್ಲದಿದ್ದರೆ ನೋಂದಾಯಿಸಿಕೊಳ್ಳಬೇಕು. ತಪ್ಪಾಗಿ ಮುದ್ರಿತವಾಗಿದ್ದಲ್ಲಿ ಸರಿಪಡಿಸಿಕೊಳ್ಳಬೇಕು. ಈ ಕಾರ್ಯ ಜಿಲ್ಲೆಯ ಎಲ್ಲಾ ಮತ ಗಟ್ಟೆಗಳಲ್ಲಿ (ಹತ್ತಿರದ ಅಂಗನವಾಡಿ ಕೇಂದ್ರ/ಸರಕಾರಿ ಶಾಲೆಗಳಲ್ಲಿ) ನಡೆಯಲಿದೆ.
ಭಾರತೀಯ ಪ್ರಜೆ ಹಾಗೂ 18 ವರ್ಷ ವಯಸ್ಸಿನವರು ಇದಕ್ಕೆ ಅರ್ಹರಾಗಿರುತ್ತಾರೆ. ಅದಕ್ಕಾಗಿ ಇತ್ತೀಚಿನ ಪಾಸ್‌ಪೋರ್ಟ್ ಆಳತೆಯ ಎರಡು ಭಾವಚಿತ್ರ ಗಳು, ವಯಸ್ಸಿನ ದಾಖಲೆಗಳು (ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಅಧಾರ್ ಕಾರ್ಡ್, ಪಾಸ್‌ಪೋರ್ಟ್, ಎಸೆಸೆಲ್ಸಿ/ಪಿಯುಸಿ ಅಂಕಪಟ್ಟಿ, ಪಾನ್ ಕಾರ್ಡ್), ವಿಳಾಸ ದಾಖಲೆ (ಪಡಿತರ ಚೀಟಿ, ಆಧಾರ್ ಕಾರ್ಡ್, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಶೀದಿ, ವಿದ್ಯುತ್ ಬಿಲ್ ಪಾವತಿ ರಶೀದಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಬಾಡಿಗೆ ಕರಾರು ಪತ್ರ) ಗಳೊಂದಿಗೆ ಸಮೀಪದ ಮತಗಟ್ಟೆಗಳಿಗೆ ಭೇಟಿ ನೀಡಬೇಕು ಎಂದು ಚುನಾವಣಾಧಿಕಾರಿ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















