ಸೇನಾ ದಾಳಿ ರಾಜಕೀಯ ಬಳಕೆಗೆ ಖಂಡನೆ: ಯಡಿಯೂರಪ್ಪ ಪ್ರತಿಕೃತಿ ದಹನ

ಬೆಂಗಳೂರು, ಮಾ.1: ಸೇನಾ ದಾಳಿ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯ ಕರ್ತರು, ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್. ಮನೋಹರ್, ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 44 ಮಂದಿ ವೀರ ಯೋಧರು ಪ್ರಾಣ ತ್ಯಾಗ ಮಾಡಿದ ಸಂದರ್ಭದಲ್ಲಿ ಕೇಂದ್ರ ಸರಕಾರಕ್ಕೆ ಪ್ರತಿಪಕ್ಷಗಳು ಸಂಪೂರ್ಣ ಸಹಕಾರ ನೀಡಿ ಭಯೋತ್ಪಾದನೆ ನಿರ್ಮೂಲನೆ ಮಾಡಲು ಬೆಂಬಲ ವ್ಯಕ್ತಪಡಿಸಿದ್ದವು ಎಂದರು.
ದೇಶದ ಸೇನಾ ಮುಖ್ಯಸ್ಥರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ ಶತ್ರು ನಾಶ ಮಾಡುವ ಮೂಲಕ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ್ದಾರೆ. ಆದರೆ, ಭಯೋತ್ಪಾದಕರ ವಿರುದ್ಧ ದಾಳಿ ನಡೆಸಿದ್ದರಿಂದ ಕರ್ನಾಟಕದಲ್ಲಿ 22 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಅವಕಾಶ ಇದೆ ಎಂದಿರುವ ಯಡಿಯೂರಪ್ಪ ಹೇಳಿಕೆ ತಲೆ ತಗ್ಗಿಸುವಂತಹದ್ದಾಗಿದೆ ಎಂದು ಹೇಳಿದರು.
ದೇಶದ ವೀರ ಯೋಧರ ಸಾವಿನಲ್ಲಿ ರಾಜಕಾರಣ ಮಾಡುವ ಇಂತಹ ವ್ಯಕ್ತಿಗಳನ್ನು ಬಿಜೆಪಿ ಕೂಡಲೇ ಹೊರ ಹಾಕಬೇಕು ಹಾಗೂ ಪ್ರಧಾನಿ ಮೋದಿಯವರು ಹುತಾತ್ಮ ಯೋಧರ ಕುಟುಂಬಗಳ ಕ್ಷಮೆ ಯಾಚಿಸಬೇಕು ಎಂದು ಆಗ್ರಹ ಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಜಿ.ಜನಾರ್ಧನ್, ಮುಖಂಡರಾದ ಸಲೀಂ, ಶೇಖರ್, ಹೇಮರಾಜು ಸೇರಿದಂತೆ ಪ್ರಮುಖರಿದ್ದರು.






.jpg)
.jpg)

