ತಲಪಾಡಿ: ಟೋಲ್‌ಗೇಟ್‌ಗೆ ಸ್ಥಳೀಯರಿಂದ ಮುತ್ತಿಗೆ

ಮಂಗಳೂರು, ಮಾ.1: ಸರಕಾರಿ ಮಟ್ಟದಲ್ಲಿ ನಡೆದ ಸಭೆಯ ನಿಯಮ ಉಲ್ಲಂಘಿಸಿ ದಾಖಲೆಗಳನ್ನು ಕೇಳಿ ವಾಹನ ಸವಾರರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ತಲಪಾಡಿ ನಿವಾಸಿಗಳು ತಲಪಾಡಿ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಚಿವರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಂಸದರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯರಿಗೆ ಟೋಲ್‌ಗೇಟ್‌ನಲ್ಲಿ ವಿನಾಯಿತಿ ನೀಡುವ ಬಗ್ಗೆ ಒಪ್ಪಿಗೆ ಸೂಚಿಸಲಾಗಿತ್ತು. ಅದರಂತೆ ಚುನಾವಣಾ ಗುರುತು ಚೀಟಿ ಅಥವಾ ಆಧಾರ್ ಕಾರ್ಡ್ ಪರಿಗಣಿಸುವಂತೆ ತಿಳಿಸಲಾಗಿತ್ತು.
ಆದರೆ ಟೋಲ್‌ಗೇಟ್‌ನಲ್ಲಿ ವಾಹನ ಪರವಾನಿಗೆ, ಚಾಲನಾ ಪರವಾನಿಗೆ ಕೇಳಿ ಕಿರುಕುಳ ನೀಡಲಾಗುತ್ತಿದೆ. ಇವೆರಡು ದಾಖಲೆಗಳನ್ನು ಕೇಳುವ ಅಧಿಕಾರ ಇರುವುದು ಸಂಬಂಧಪಟ್ಟ ಇಲಾಖೆಗೆ ಮಾತ್ರ. ನಕಲಿ ಆಧಾರ್ ಕಾರ್ಡ್ ಮತ್ತು ಗುರುತು ಚೀಟಿ ತೋರಿಸಿದರೆ ಠಾಣೆಗೆ ದೂರು ಕೊಡಿ. ಆದರೆ ಮುಂದೆ ಇಂತಹ ಪ್ರಕರಣ ನಡೆದರೆ ಆಗುವ ಅನಾಹುತಗಳಿಗೆ ಟೋಲ್‌ಗೇಟ್ ಅಧಿಕಾರಿಗಳೇ ಕಾರಣ ಎಂದು ಪ್ರತಿಭಟನಾಕಾರರಾದ ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ ಎಚ್ಚರಿಸಿದರು.
ಹುಸೈನ್ ತಲಪಾಡಿ, ಶಬೀರ್ ಅಬ್ಬಾಸ್ ತಲಪಾಡಿ, ಸಂಶುದ್ದೀನ್ ಉಚ್ಚಿಲ್, ಬಿ.ಇಸ್ಮಾಯೀಲ್, ಮೂಸಾ ತಲಪಾಡಿ, ಹಮೀದ್ ಹಸನ್ ತಲಪಾಡಿ, ಹರ್ಷದ್ ವರ್ಕಾಡಿ ಮತ್ತಿತರರು ಪಾಲ್ಗೊಂಡಿದ್ದರು.







