ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಬಿಎಸ್‌ವೈ: ಉಗ್ರಪ್ಪ

ಬಳ್ಳಾರಿ, ಮಾ.1: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಸೇನೆಯ ಕಾರ್ಯಾಚರಣೆ ಹಾಗೂ ಯೋಧರ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದು ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಹಾಗೂ ಪಾಕಿಸ್ತಾನದ ನಡುವೆ ಉಂಟಾಗಿರುವ ಯುದ್ಧದ ಸನ್ನಿವೇಶವನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಇಂತಹ ಹೀನ ಕೃತ್ಯಕ್ಕೆ ಯಾರೂ ಕೈ ಹಾಕಬಾರದು. ಈ ಎಲ್ಲ ವಿಷಯಗಳನ್ನು ಗಮನಿಸುತ್ತಿರುವ ಜನರು, ಸರಿಯಾದ ಸಮಯದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಯೋಧರ ಜೊತೆ ಇರಬೇಕು ಎಂದು ಉಗ್ರಪ್ಪ ಹೇಳಿದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಿಷನ್ 150 ಎಂದು ಹೇಳಿದ್ದ ಬಿಜೆಪಿಯವರು, ಈಗ ಲೋಕಸಭಾ ಚುನಾವೆ ವೇಳೆ ಮಿಷನ್ 22 ಎನ್ನುತ್ತಿದ್ದಾರೆ.
ರಾಜಕೀಯ ಏನೇ ಇರಲಿ. ಆದರೆ, ಸೇನೆಯ ಕಾರ್ಯಾಚರಣೆಯನ್ನು ತನ್ನ ರಾಜಕೀಯ ಲಾಭಕ್ಕೆ ಯಾರೂ ಬಳಸಿಕೊಳ್ಳಲು ಮುಂದಾಗಬಾರದು. ಇದು ಕೇವಲ ಯಡಿಯೂರಪ್ಪಗೆ ಮಾತ್ರವಲ್ಲ, ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೂ ಅನ್ವಯಿಸುತ್ತದೆ ಎಂದು ಅವರು ತಿಳಿಸಿದರು.







