ಕಟ್ಬೆಲ್ತೂರು: ಒಂಟಿ ಮಹಿಳೆ ಸಂಶಯಾಸ್ಪದ ಸಾವು

ಕುಂದಾಪುರ, ಮಾ.1: ಕಟ್ಬೆಲ್ತೂರು ಗ್ರಾಮದ ಹರೆಗೋಡು ಸುಳ್ಸೆ ನಾವುಡರ ಅಂಗಡಿಯ ಬಳಿಯ ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆ ಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಗುಲಾಬಿ ಮೊಗವೀರ (55) ಎಂದು ಗುರುತಿಸಲಾಗಿದೆ.
ಹೆಮ್ಮಾಡಿ ಪೇಟೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ಇವರು, ಪತಿಯ ಮರಣದ ನಂತರ ಮನೆಯಲ್ಲಿ ಒಂಟಿಯಾಗಿ ವಾಸ ಮಾಡಿಕೊಂಡಿದ್ದರು. ಮಾ.1ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಗುಲಾಬಿ ಮನೆಯ ಒಳಕೋಣೆ ಯಲ್ಲಿ ನೆಲದಲ್ಲಿ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ.
ಈ ವೇಳೆ ಪರಿಶೀಲನೆ ನಡೆಸಿದಾಗ ಗುಲಾಬಿ ಹೆಚ್ಚಾಗಿ ಧರಿಸುತ್ತಿದ್ದ ಕುತ್ತಿಗೆ ಯಲ್ಲಿ ಚಿನ್ನದ ಸರ, ಕಿವಿಯಲ್ಲಿ ಬೆಂಡೋಲೆ, ಕೈಯಲ್ಲಿ ರಿಂಗ್ ಕಂಡುಬಂದಿಲ್ಲ. ಹಾಗಾಗಿ ಚಿನ್ನಾಭರಣಕ್ಕಾಗಿ ಇವರನ್ನು ಕೊಲೆ ಮಾಡಿರಬಹುದೆ ಎಂಬ ಶಂಕೆ ವ್ಯಕ್ತವಾಗಿದೆ. ಇವರು ಫೆ.28ರ ರಾತ್ರಿ 8ಗಂಟೆಯಿಂದ ಮಾ.1ರ ಬೆಳಗ್ಗೆ 11 ಗಂಟೆ ಮಧ್ಯಾವಧಿಯಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ.
ಇವರ ಮರಣದ ಬಗ್ಗೆ ಸಂಶಯ ಇರುವುದಾಗಿ ಮೃತರ ಸಂಬಂಧಿ ಉದಯ ಛಾತ್ರಬೆಟ್ಟು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.







