ಪುಲ್ವಾಮ, ಬಾಲಕೋಟ್ ಟೈಟಲ್ ಗಳಿಗೆ ಭಾರೀ ಬೇಡಿಕೆ
ಹೆಸರು ನೋಂದಣಿಗೆ ಮುಗಿಬಿದ್ದರು!

ಮುಂಬೈ, ಮಾ.1: ಒಂದೆಡೆ ಭಾರತ-ಪಾಕ್ ಗಡಿಭಾಗದಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ಮುಂದುವರಿದಿರುವಂತೆಯೇ, ಇನ್ನೊಂದೆಡೆ ಬಾಲಿವುಡ್ ಸಿನೆಮ ನಿರ್ಮಾಪಕರು ‘ಪುಲ್ವಾಮಾ: ದಿ ಡೆಡ್ಲಿ ಅಟ್ಯಾಕ್’, ವಿಂಗ್ ಕಮಾಂಡರ್ ಅಭಿನಂದನ್, ಬಾಲಕೋಟ್’ ಹೀಗೆ ದೇಶಪ್ರೇಮದ ಸಂದೇಶ ಬೀರುವ ಸಿನೆಮಗಳ ಹೆಸರನ್ನು ನೋಂದಾಯಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ ಎಂದು ವರದಿಯಾಗಿದೆ.
ಫೆಬ್ರವರಿ 26ರಂದು ಭಾರತದ ವಾಯುಪಡೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಸರ್ಜಿಕಲ್ ದಾಳಿ ಆರಂಭಿಸಿದ ಮಾಹಿತಿ ಹೊರಬೀಳುತ್ತಿದ್ದಂತೆಯೇ ಪಶ್ಚಿಮ ಮುಂಬೈಯ ಅಂಧೇರಿಯಲ್ಲಿರುವ ‘ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ(ಐಎಂಎಂಪಿಎ)ದ ಕಚೇರಿಗಳಲ್ಲಿ ಏಕಾಏಕಿ ಚಟುವಟಿಕೆ ಬಿರುಸುಗೊಂಡಿತು. ತಾವು ಮುಂದಿನ ದಿನಗಳಲ್ಲಿ ನಿರ್ಮಿಸಲು ಬಯಸುವ, ದೇಶಪ್ರೇಮದ ಸಂದೇಶ ಸಾರುವ ಸಿನೆಮಗಳ ಹೆಸರನ್ನು ನೋಂದಾವಣೆ ಮಾಡಲು ಕನಿಷ್ಟ 5 ವಿವಿಧ ಸಿನೆಮ ನಿರ್ಮಾಣ ಸಂಸ್ಥೆಗಳ ಪ್ರತಿನಿಧಿಗಳು ಧಾವಿಸಿದ್ದರು. ತಮಗೂ ಮೊದಲು ಈ ಹೆಸರನ್ನು ಮತ್ತೊಬ್ಬರು ನೋಂದಾಯಿಸಿದ್ದಾರೆ ಎಂದು ತಿಳಿದೊಡನೆ ಹೆಸರಿನಲ್ಲಿ ಸ್ವಲ್ಪ ಬದಲಾಯಿಸಿಕೊಂಡು (ಉದಾಹರಣೆಗೆ ‘ಪುಲ್ವಾಮಾ ವರ್ಸಸ್ ಸರ್ಜಿಕಲ್ ಸ್ಟ್ರೈಕ್ 2.0’ ) ನೋಂದಾಯಿಸಿಕೊಳ್ಳಲು ಅವರಲ್ಲಿ ಚರ್ಚೆ ಸಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪುಲ್ವಾಮಾ ಭಯೋತ್ಪಾದಕ ದಾಳಿ ಹಾಗೂ ಬಾಲಕೋಟ್‌ನಲ್ಲಿ ಐಎಎಫ್ ದಾಳಿಗೆ ಸಂಬಂಧಿಸಿದ ಹೆಸರಿನ ಸಿನೆಮ ಮಾಡಲು ಕಳೆದೊಂದು ವಾರದಿಂದ ನಿರ್ಮಾಪಕರು ತೀವ್ರ ಪೈಪೋಟಿಗೆ ಇಳಿದಿದ್ದಾರೆ ಎಂದು ಐಎಂಎಂಪಿಎ ಪ್ರತಿನಿಧಿಗಳು ದೃಢಪಡಿಸಿದ್ದಾರೆ. ಸಿನೆಮದ ಹೆಸರು ನೋಂದಾಯಿಸಲು ಒಂದು ಸರಳವಾದ ಅರ್ಜಿ ಫಾರಂ ಭರ್ತಿ ಮಾಡಿಕೊಟ್ಟರೆ ಸಾಕು. ಸಿನೆಮ ನಿರ್ಮಾಣ ಸಂಸ್ಥೆ ತನ್ನ ಆದ್ಯತೆಗನುಸಾರ ನಾಲ್ಕರಿಂದ ಐದು ಪರ್ಯಾಯ ಹೆಸರನ್ನು ಇದರಲ್ಲಿ ಸೂಚಿಸಬೇಕು. ಅಲ್ಲದೆ ಶೇ.18 ಜಿಎಸ್‌ಟಿ ಜೊತೆಗೆ 250 ರೂ. ಶುಲ್ಕ ಪಾವತಿಸಬೇಕು. ಕೆಲವೊಮ್ಮೆ ಹೀಗೆ ಹೆಸರನ್ನು ನೋಂದಾಯಿಸಿಕೊಂಡು ಸುಮ್ಮನೆ ಇದ್ದುಬಿಡುತ್ತಾರೆ. ಈ ಹೆಸರನ್ನು ಇನ್ನೊಬ್ಬ ನಿರ್ಮಾಪಕ ಹೆಚ್ಚಿನ ಮೊತ್ತ ನೀಡಿ ಪಡೆದುಕೊಳ್ಳುತ್ತಾನೆ ಎಂಬ ಖಚಿತತೆ ಇವರಿಗಿರುತ್ತದೆ. ಕೆಲವೊಮ್ಮೆ ಹೆಸರಿನ ಫಾಂಟ್ ಕಡಿಮೆಗೊಳಿಸಿ ಅಥವಾ ಹೆಸರಿಗೆ ಇನ್ನೊಂದು ಟ್ಯಾಗ್‌ಲೈನ್ ಸೇರಿಸಿದರೆ ಆಗ ಆ ಸಿನೆಮದ ಹೆಸರೂ ನೋಂದಾವಣೆಯಾಗುತ್ತದೆ. ಉದಾಹರಣೆಗೆ ‘ಪುಲ್ವಾಮ’ ಎಂದು ಒಬ್ಬರು ನೋಂದಾಯಿಸಿದರೆ ಮತ್ತೊಬ್ಬರು ‘ಪುಲ್ವಾಮಾ: ದಿ ಡೆಡ್ಲಿ ಅಟ್ಯಾಕ್’ ಎಂದು ನೋಂದಾಯಿಸುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉರಿ ಸಿನೆಮದ ಯಶಸ್ಸಿನ ಪ್ರೇರಣೆ
ಸರ್ಜಿಕಲ್ ದಾಳಿಯ ಬಳಿಕ ಭಾರತ-ಪಾಕಿಸ್ತಾನ ಸಂಘರ್ಷದ ವಿಷಯದ ಆಧಾರದಲ್ಲಿ ಬಾಲಿವುಡ್‌ನಲ್ಲಿ ಹಲವು ಸಿನೆಮಗಳು ನಿರ್ಮಾಣಗೊಂಡಿವೆ. ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿಯಾದ ‘ಉರಿ ಸಿನೆಮದ ಯಶಸ್ಸಿನಿಂದ ಪ್ರೇರಣೆಗೊಂಡು ಫೆಬ್ರವರಿಯಲ್ಲಿ ನೋಂದಣಿಗೊಂಡಿರುವ ಸಿನೆಮಗಳಲ್ಲಿ ವಿಕ್ರಮ್ ಮಲ್ಹೋತ್ರಾ ನೇತೃತ್ವದ ನಿರ್ಮಾಣ ಸಂಸ್ಥೆಯ ಹೆಸರಲ್ಲಿ ನೋಂದಣಿಗೊಂಡಿರುವ ‘ಜೋಷ್’ ಮತ್ತು ‘ಹೌ ಈಸ್ ದಿ ಜೋಷ್’ ಪ್ರಮುಖವಾಗಿವೆ. ಫೆ.14ರಂದು ಪುಲ್ವಾಮದಲ್ಲಿ ಭಯೋತ್ಪಾದಕರ ಆತ್ಮಾಹುತಿ ದಾಳಿಯ ಬಳಿಕ ನೋಂದಾವಣೆಗೊಂಡಿರುವ ಸಿನೆಮಗಳೆಂದರೆ- ಪುಲ್ವಾಮ, ಪುಲ್ವಾಮ: ದಿ ಸರ್ಜಿಕಲ್ ಸ್ಟ್ರೈಕ್, ವಾರ್ ರೂಂ, ಹಿಂದುಸ್ತಾನ್ ಹಮಾರಾ ಹೈ, ಪುಲ್ವಾಮಾ ಟೆರರ್ ಅಟ್ಯಾಕ್, ದಿ ಅಟ್ಯಾಕ್ಸ್ ಆಫ್ ಪುಲ್ವಾಮ, ವಿತ್ ಲವ್, ಫ್ರಮ್ ಇಂಡಿಯಾ, ಎಟಿಎಸ್- ವನ್ ಮ್ಯಾನ್ ಶೋ... .







