ಐಬಿ, ಎಲ್‌ಒಸಿಯಲ್ಲಿರುವ ಗ್ರಾಮಗಳಲ್ಲಿ 65 ಪರಿಹಾರ ಕೇಂದ್ರಗಳ ಸ್ಥಾಪನೆ

ಜಮ್ಮು, ಮಾ. 1: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮುಂದುವರಿದಿರುವ ನಡುವೆ ಜಮ್ಮು ಹಾಗೂ ಕಾಶ್ಮೀರದ ಕಥುವಾದ ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿರುವ ಗ್ರಾಮಗಳಲ್ಲಿ ಸುಮಾರು 65 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ರಾಜೌರಿ ಹಾಗೂ ಪೂಂಛ್ ಜಿಲ್ಲೆಯಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ. ವಸತಿ ಹಾಗೂ ಆಹಾರದ ಸೌಲಭ್ಯದೊಂದಿಗೆ ಸರಕಾರಿ ಕಟ್ಟಡ, ಶಾಲೆ, ಧಾರ್ಮಿಕ ಸ್ಥಳಗಳು ಹಾಗೂ ಬ್ಯಾಂಕ್ವೆಟ್ ಹಾಲ್‌ಗಳಲ್ಲಿ ಈ ಶಿಬಿರಗಳನ್ನು ಆರಂಭಿಸಲಾಗಿದೆ. ಹಿರಾನಗರ್ ಉಪ ವಿಭಾಗದಲ್ಲಿ ಕಥುವಾ ಜಿಲ್ಲಾಡಳಿತ 20 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.
ಯಾವುದೇ ಸಂಭವನೀಯತೆಯನ್ನು ನಿರ್ವಹಿಸಲು ನಾವು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ತೆರವುಗೊಳಿಸುವ ಯೋಜನೆ ಸಿದ್ಧವಾಗಿದೆ. ಶಿಬಿರದ ತಂಡಗಳನ್ನು ರೂಪಿಸಲಾಗಿದೆ. ವೈದ್ಯಕೀಯ ತಂಡಗಳು ಸ್ಥಳದಲ್ಲಿವೆ. ಸಾಕಷ್ಟು ಔಷಧಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಹಿರಾನಗರ್ ಉಪ ವಿಭಾಗದ ದಂಡಾಧಿಕಾರಿ ಸುರೇಶ್ ಶರ್ಮಾ ಹೇಳಿದ್ದಾರೆ.
ಆರ್‌ಎಸ್ ಪುರಾ ಪ್ರದೇಶದಲ್ಲಿ 10, ಅಖ್ನೂರ್ ಪ್ರದೇಶದಲ್ಲಿ 20, ಸಾಂಬಾ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ 15 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಗುರುವಾರ ಜಮ್ಮು ಜಿಲ್ಲಾಧಿಕಾರಿ ರಮೇಶ್ ಕುಮಾರ್ ಹಾಗೂ ಎಸ್‌ಎಸ್‌ಪಿ ತೇಜಿಂದರ್ ಸಿಂಗ್ ಹಾಗೂ ಇತರ ಕೆಲವು ಅಧಿಕಾರಿಗಳು ಮುಂಚೂಣಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.







