ವೆಲೆನ್ಸಿಯಾ ಫೈನಲ್‌ಗೆ: ಬಾರ್ಸಿಲೋನ ಎದುರಾಳಿ
ಕೋಪಾ ಡೆಲ್ ರೆ ಫುಟ್ಬಾಲ್ ಟೂರ್ನಮೆಂಟ್

ಮೆಸ್ಟಾಲ್ಲ(ಸ್ಪೇನ್) ಮಾ.1: ದ್ವಿತೀಯಾರ್ಧದಲ್ಲಿ ಮುನ್ಪಡೆ ಆಟಗಾರ ಜೆಸೆ ರೋಡ್ರಿಗೊ ಗಳಿಸಿದ ಏಕೈಕ ಗೋಲಿನ ನೆರವಿನಿಂದ ವೆಲೆನ್ಸಿಯಾ ತಂಡ ರಿಯಲ್ ಬೆಟಿಸ್ ತಂಡವನ್ನು 1-0 ಅಂತರದಿಂದ ಸೋಲಿಸಿ ಕೋಪಾ ಡೆಲ್ ರೆ ಕಪ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಮೇ 25ರಂದು ನಡೆಯುವ ಅಂತಿಮ ಹಣಾಹಣಿಯಲ್ಲಿ ವೆಲೆನ್ಸಿಯಾ ತಂಡ ಬಲಿಷ್ಠ ಬಾರ್ಸಿಲೋನವನ್ನು ಎದುರಿಸಲಿದೆ.
ಮಾರ್ಸೆಲಿನೊ ನಾಯಕ್ವದಲ್ಲಿ ಮಿನುಗುತ್ತಿರುವ ವೆಲೆನ್ಸಿಯಾ ತಂಡ, ದಿಟ್ಟ ಪ್ರದರ್ಶನದ ಮೂಲಕ 2008ರ ಬಳಿಕ ಪ್ರಮುಖ ಟೂರ್ನಿಯೊಂದರಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿತು. ಪ್ರಥಮಾರ್ಧ ಮುಗಿಯಲು ಇನ್ನೇನು 6 ನಿಮಿಷಗಳಿದ್ದಾಗ ಪ್ಯಾರಿಸ್ ಸೈಂಟ್-ಜರ್ಮೈನ್ ತಂಡದಿಂದ ಎರವಲು ಪಡೆದುಕೊಳ್ಳಲಾದ ಮುನ್ಪಡೆ ಆಟಗಾರ ರೋಡ್ರಿಗಸ್ ಬೆಟಿಸ್ ತಂಡದ ಪರವಾಗಿ ಗೋಲು ಗಳಿಸಲು ನೆಟ್‌ನ ಅತೀ ಸಮೀಪ ಬಂದಿದ್ದರು. ಆದರೆ ತವರು ತಂಡದ ಗೋಲ್‌ಕೀಪರ್‌ನ ಜುವಾಮೆ ಡೊಮೆನೆಕ್‌ರ ಜಾಣ್ಮೆಯ ಕಾರಣ ಗೋಲಾಗುವುದು ತಪ್ಪಿತು.
ಆ ಬಳಿಕ 56ನೇ ನಿಮಿಷದಲ್ಲಿ ವೆಲೆನ್ಸಿಯಾ ತಂಡದ ಆಟಗಾರ ಕೆವಿನ್ ಗ್ಯಾಮೆರೊ ಹೊಡೆದ ಚೆಂಡನ್ನು ವಶಕ್ಕೆ ಪಡೆದ ಅದೇ ತಂಡದ ರೊಡ್ರಿಗೊ ಅವರು ಬೆಟಿಸ್ ತಂಡದ ಗೋಲುಪೆಟ್ಟಿಗೆ ಸೇರಿಸುವಲ್ಲಿ ತಪ್ಪು ಮಾಡಲಿಲ್ಲ. ಆ ಮೂಲಕ ಅವರು ಕೋಪಾ ಟೂರ್ನಿಯಲ್ಲಿ 4ನೇ ಗೋಲು ಗಳಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಗೆಟೆಫ್ ತಂಡದ ವಿರುದ್ಧ ಅವರು ಹ್ಯಾಟ್ರಿಕ್ ಸಾಧಿಸಿದ್ದರು.
ಮತ್ತೊಂದೆಡೆ ಬೆಟಿಸ್ ತಂಡ ಎದುರಾಳಿಯ ಮೇಲೆ ಯಾವುದೇ ಒತ್ತಡ ಹೇರಲು ವಿಫಲವಾಯಿತು.





