ವಿಶ್ವಕಪ್ ಗೆ ಮೊದಲು ಟೀಮ್ ಇಂಡಿಯಾಕ್ಕೆ ಅಂತಿಮ ಪರೀಕ್ಷೆ

ಹೈದರಾಬಾದ್,ಮಾ.1: ಆತಿಥೇಯ ಭಾರತ ವಿಶ್ವಕಪ್ ಆರಂಭಕ್ಕೆ ಮೊದಲು ಇನ್ನು ಕೇವಲ 5 ಏಕದಿನ ಪಂದ್ಯಗಳನ್ನು ಆಡಲಿದೆ. ಹೆಚ್ಚಿನ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ. ಆದಾಗ್ಯೂ ಆಯ್ಕೆಗಾರರು ಅದಕ್ಕೂ ಮೊದಲೇ ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವ ಅಗತ್ಯವಿದೆ. ಭಾರತ ಶನಿವಾರ ಆಸ್ಟ್ರೇಲಿಯ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿದ್ದು, ಕೆ.ಎಲ್.ರಾಹುಲ್ ಹಾಗೂ ವಿಜಯ ಶಂಕರ್‌ಗೆ ಮತ್ತೊಂದು ಅವಕಾಶ ಲಭಿಸಿದೆ.
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸೀಮಿತ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರತ್ತ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಚಿತ್ತಹರಿಸಿದ್ದಾರೆ.
ರಾಹುಲ್, ರಿಷಭ್ ಪಂತ್‌ಗೆ ಅವಕಾಶ: ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ಜನವರಿಯಲ್ಲಿ ತಂಡದಿಂದ ಕೈಬಿಡಲ್ಪಟ್ಟಿದ್ದ ರಾಹುಲ್, ಟಿವಿ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಕೆಲವು ಸಮಯ ಅಮಾನತುಗೊಂಡಿದ್ದರು. ಆಸೀಸ್ ವಿರುದ್ಧ ಬುಧವಾರ ಕೊನೆಗೊಂಡ ಟ್ವೆಂಟಿ-20 ಸರಣಿಯ 2 ಪಂದ್ಯಗಳಲ್ಲಿ 50 ಹಾಗೂ 47 ರನ್ ಗಳಿಸಿರುವ ರಾಹುಲ್ ಮೊದಲಿನ ಲಯಕ್ಕೆ ವಾಪಸಾಗಿದ್ದು, ಐಸಿಸಿ ಟಿ-20 ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 6ನೇ ಸ್ಥಾನ ತಲುಪಿದ್ದಾರೆ. 26ರ ಹರೆಯದ ರಾಹುಲ್ ಟಿ-20 ಸರಣಿಯಲ್ಲಿ ನೀಡಿದ್ದ ಪ್ರದರ್ಶನ ಪುನರಾವರ್ತಿಸಿದರೆ ವಿಶ್ವಕಪ್ ತಂಡದಲ್ಲಿ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾರೊಂದಿಗೆ ಹೆಚ್ಚುವರಿ ಓಪನರ್ ಆಗಿ ತಂಡ ಸೇರಿಕೊಳ್ಳಬಹುದು.
ರಿಷಭ್ ಪಂತ್ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿದ್ದಾರೆ. ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ವಿರುದ್ಧ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಕಳಪೆ ಪ್ರದರ್ಶನ ನೀಡಿದ ಕಾರಣ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ. ಸೀಮಿತ ಓವರ್ ಪಂದ್ಯದಲ್ಲಿ ಆಸ್ಟ್ರೇಲಿಯದಂತಹ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ ಪಂತ್ ವಿಶ್ವಕಪ್‌ಗೆ ತೆರಳುವುದು ಖಚಿತ. 21ರ ಹರೆಯದ ಪಂತ್ ಟಿ-20 ಸರಣಿಯಲ್ಲಿ ಒಟ್ಟು 4 ರನ್ ಗಳಿಸಿ ವಿಫಲರಾಗಿದ್ದರು.

ಆಲ್‌ರೌಂಡರ್ ಗೊಂದಲ: ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ವಿರುದ್ಧ ಆಲ್‌ರೌಂಡ್ ಕೌಶಲ್ಯ ಪ್ರದರ್ಶಿಸಿದ್ದ ಕೇದಾರ್ ಜಾಧವ್ ಫಿಟ್ ಆಗಿದ್ದರೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು. ಜಾಧವ್ ಉಪಸ್ಥಿತಿಯ ಹೊರತಾಗಿಯೂ ಭಾರತ ಖಾಯಂ ಬೌಲಿಂಗ್ ಆಲ್‌ರೌಂಡರ್ ಶೋಧದಲ್ಲಿದೆ. ಹಾರ್ದಿಕ್ ಪಾಂಡ್ಯ, ವಿಜಯ ಶಂಕರ್ ಹಾಗೂ ರವೀಂದ್ರ ಜಡೇಜ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ವಿಶ್ವಕಪ್‌ಗೆ ಮೊದಲು ಪಾಂಡ್ಯ ಅವರು ಫಿಟ್ನೆಸ್ ವಿಚಾರ ಚಿಂತೆಗೀಡು ಮಾಡಿದೆ. ಶಂಕರ್ ಕಿವೀಸ್ ವಿರುದ್ಧ ಟಿ-20 ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಅವರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬೇಕಾದರೆ ಆಸೀಸ್ ವಿರುದ್ಧ ಬೌಲಿಂಗ್‌ನಲ್ಲಿ ಸುಧಾರಿಸಬೇಕಾಗಿದೆ. 2018ರ ಏಶ್ಯಕಪ್‌ನಲ್ಲಿ ಪುನರಾಗಮನ ಮಾಡಿದ್ದ ಜಡೇಜ 4 ವಿಕೆಟ್ ಪಡೆದಿದ್ದರು.ಇದೀಗ ಅವರು ತಂಡದ ಮೊದಲ ಆಯ್ಕೆಯ ಸ್ಪಿನ್ ಜೋಡಿಯಾದ ಯಜುವೇಂದ್ರ ಚಹಾಲ್ ಹಾಗೂ ಕುಲದೀಪ್ ಯಾದವ್‌ರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.
ಬೌಲಿಂಗ್ ವಿಭಾಗ:ಭಾರತೀಯ ತಂಡದ ಇಬ್ಬರು ಪ್ರಮುಖ ವೇಗಿಗಳಾದ ಜಸ್‌ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಶಮಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ನಿಶ್ಚಿತ. ಖಲೀಲ್ ಅಹ್ಮದ್ ಹಾಗೂ ಮುಹಮ್ಮದ್ ಸಿರಾಜ್‌ಗೆ ಅವಕಾಶ ನೀಡಿದರೂ ಯಾವುದೇ ಫಲ ಲಭಿಸಿಲ್ಲ. ಭುವನೇಶ್ವರ ಕುಮಾರ್ ಭಾರತದ ಮೂರನೇ ಪ್ರಮುಖ ಬೌಲರ್ ಆಗಿದ್ದಾರೆ. ಕುಮಾರ್ ಇತ್ತೀಚೆಗೆ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದು, ಸಿದ್ದಾರ್ಥ್ ಕೌಲ್ ಸರಣಿಯಲ್ಲಿ ಅವಕಾಶ ಪಡೆದಿದ್ದಾರೆ. ಆಯ್ಕೆಗಾರರ ಗಮನ ಸೆಳೆಯುವ ಉತ್ತಮ ಅವಕಾಶ ಕೌಲ್‌ಗೆ ಲಭಿಸಿದೆ. ಬುಮ್ರಾಗೆ ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯಿದ್ದು, ಕೌಲ್‌ಗೆ ಅವಕಾಶ ಸಿಗಬಹುದು. ಮಧ್ಯಮ ಹಾಗೂ ಡೆತ್ ಓವರ್‌ನಲ್ಲಿ ಕೌಲ್ ವಿಕೆಟ್ ಪಡೆಯಲು ಸಫಲವಾದರೆ ವಿಶ್ವಕಪ್‌ನಲ್ಲಿ ಭಾಗವಹಿಸಲು ಇಂಗ್ಲೆಂಡ್ ವಿಮಾನ ಏರಬಹುದು.







