ಐಸಿಐಸಿಐ-ವಿಡಿಯೋಕಾನ್ ಪ್ರಕರಣ: ಚಂದಾ ಕೊಚ್ಚರ್, ಧೂತ್ ನಿವಾಸದಲ್ಲಿ ಶೋಧ

ಹೊಸದಿಲ್ಲಿ, ಮಾ.1: ಐಸಿಐಸಿಐ-ವಿಡಿಯೋಕಾನ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಶುಕ್ರವಾರ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ವಿಡಿಯೋಕಾನ್ ಸಂಸ್ಥೆಯ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ನಿವಾಸ ಹಾಗೂ ಕಚೇರಿಯಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಹಾಗೂ ಇತರ ಪ್ರದೇಶಗಳಲ್ಲಿ ಕನಿಷ್ಟ ಐದು ಕಚೇರಿ ಹಾಗೂ ವಸತಿ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಹಾಗೂ ಪೊಲೀಸರ ತಂಡ ದಾಳಿ ನಡೆಸಿದೆ. ವಿಡಿಯೋಕಾನ್ ಸಂಸ್ಥೆಗೆ ಐಸಿಐಸಿಐ ಬ್ಯಾಂಕ್ 1,875 ಕೋಟಿ ರೂ. ಸಾಲ ಮಂಜೂರಾತಿಗೊಳಿಸಿದಾಗ ಅಕ್ರಮ ಹಾಗೂ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ಇದಾಗಿದ್ದು , ಚಂದಾ ಕೊಚ್ಚರ್, ಅವರ ಪತಿ ದೀಪಕ್ ಕೊಚ್ಚರ್, ವೇಣುಗೋಪಾಲ್ ಧೂತ್ ಹಾಗೂ ಇತರರ ವಿರುದ್ಧ ಕಳೆದ ತಿಂಗಳು ಸಿಬಿಐ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹಣ ಅಕ್ರಮ ಸಾಗಣೆ ಕಾಯ್ದೆಯಡಿ ಕೇಸು ದಾಖಲಿಸಲಾಗಿತ್ತು.
ಚಂದಾ ಕೊಚ್ಚರ್, ಅವರ ಪತಿ ದೀಪಕ್ ಕೊಚ್ಚರ್, ವೇಣುಗೋಪಾಲ್ ಧೂತ್, ವಿಡಿಯೋಕಾನ್ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್ ಲಿ., ವಿಡಿಯೋಕಾನ್ ಇಂಡಸ್ಟ್ರೀಸ್ ಲಿ. ಸಂಸ್ಥೆಯನ್ನು ಆರೋಪಿಗಳೆಂದು ಹೆಸರಿಸಿದೆ. ಅಲ್ಲದೆ ವೇಣುಗೋಪಾಲ್ ಧೂತ್ ಸ್ಥಾಪಿಸಿದ್ದ ಸುಪ್ರೀಂ ಎನರ್ಜಿ ಸಂಸ್ಥೆ, ದೀಪಕ್ ಕೊಚ್ಚಾರ್ ನಿಯಂತ್ರಣದ ನ್ಯೂಪವರ್ ರಿನೀವೆಬಲ್ಸ್ ಸಂಸ್ಥೆಯನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಚಂದಾ ಕೊಚ್ಚರ್ ಮಂಜೂರು ಮಾಡುವ ಸಾಲದ ಮೊತ್ತದ ಬದಲಿಗೆ ಸ್ವಲ್ಪ ಮೊತ್ತವನ್ನು ದೀಪಕ್ ಕೊಚ್ಚರ್ ಮಾಲಕತ್ವದ ಸಂಸ್ಥೆಯಲ್ಲಿ ಧೂತ್ ಹೂಡಿಕೆ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.







