ಮಾ.5ರಂದು ಕುಳಾಯಿ ಸರ್ವಋತು ಮೀನುಗಾರಿಕಾ ಬಂದರಿಗೆ ಶಿಲಾನ್ಯಾಸ
ಮಂಗಳೂರು, ಮಾ.2: ಕುಳಾಯಿ ಸರ್ವಋತು ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಮಾ.5ರಂದು ಶಿಲಾನ್ಯಾಸ ನಡೆಯಲಿದೆ. ಕೇಂದ್ರ ಸಾರಿಗೆ ಮತ್ತು ಬಂದರು ಸಚಿವ ನಿತಿನ್ ಗಡ್ಕರಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ನೂತನ ತಾಂತ್ರಿಕ ವಿನ್ಯಾಸದಿಂದ ನಿರ್ಮಿಸಲ್ಪಡುವ ಕುಳಾಯಿ ಸರ್ವಋತು ಮೀನುಗಾರಿಕಾ ಬಂದರು ದೇಶದ ಎರಡನೇ ಯಶಸ್ವಿ ಸರ್ವಋತು ಮೀನುಗಾರಿಕಾ ಬಂದರು ಆಗಲಿದೆ ಎಂದು ಯೋಜನೆಯ ಸಮನ್ವಯಕಾರ ರಾಮಚಂದರ್ ಬೈಕಂಪಾಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನವಮಂಗಳೂರು ಬಂದರಿನ 4.5 ಕಿ.ಮೀ. ಉತ್ತರಕ್ಕೆ ಸಮುದ್ರ ಕಿನಾರೆಯಲ್ಲಿ ನಿರ್ಮಿಸಲಿರುವ ಈ ಬಂದರಿಗೆ ರಾಜ್ಯ ಸರ್ಕಾರ 11 ಎಕರೆ ಭೂಮಿಯನ್ನು 8 ತಿಂಗಳ ಹಿಂದೆ ಕೇಂದ್ರ ಸಾರಿಗೆ ಮತ್ತು ಬಂದರು ಸಚಿವಾಲಯಕ್ಕೆ ನೀಡಿದೆ. ಮಂಗಳೂರು-ಮಲ್ಪೆಯ ನಡುವೆ ಮೀನುಗಾರಿಕೆ ಸಂದರ್ಭ ಬೀಸುವ ಬಿರುಗಾಳಿಯಿಂದ ರಕ್ಷಣೆ ಪಡೆಯಲು ಕುಳಾಯಿ ಬಂದರು ಶ್ರೀರಕ್ಷೆಯಾಗಲಿದೆ ಎಂದರು.
* ಸಾಗರಮಾಲಾದಡಿ ಕಾರ್ಯಗತ:
ಈ ಯೋಜನೆ ಕೇಂದ್ರ ಸರ್ಕಾರದ ಕೃಷಿ ಮತ್ತು ಮೀನುಗಾರಿಕಾ ಸಚಿವರಾದ ರಾಧಾಮೋಹನ್ ಸಿಂಗ್ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರ ಪ್ರಯತ್ನದಿಂದ ಸಾಗರಮಾಲಾ ಯೋಜನೆಯಡಿ ಕಾರ್ಯಗತವಾಗುತ್ತಿದೆ. ಕೇಂದ್ರ ಸಾರಿಗೆ ಸಚಿವಾಲಯದ 9,825.50 ಲಕ್ಷ ರೂ., ನವಮಂಗಳೂರು ಬಂದರ್ ಟ್ರಸ್ಟ್‌ನ 8,842.95 ಲಕ್ಷ ರೂ. ಹಾಗೂ ಕರ್ನಾಟಕ ಸರ್ಕಾರ ಶೇ.9.82 ಲಕ್ಷ ರೂ. ಸೇರಿದಂತೆ ಒಟ್ಟು 196.51 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಾಕಾರಗೊಳ್ಳಲಿದೆ.
* ಕೋಟೆಯಾಕಾರದಲ್ಲಿ ನಿರ್ಮಾಣ:
ಯೋಜನೆಯಲ್ಲಿ ಸಮುದ್ರ ತಡೆಗೋಡೆ (ಬ್ರೇಕ್ ವಾಟರ್) ನಿರ್ಮಾಣವಾಗಲಿದೆ. ಕೋಟೆಯಾಕಾರದ ವಿನ್ಯಾಸದಲ್ಲಿರುವ ಈ ಬಂದರಿನ ಉತ್ತರ ಭಾಗದ ಬ್ರೇಕ್ ವಾಟರ್ 931 ಕಿ.ಮೀ. ಉದ್ದಕ್ಕೆ ಚಾಚಿದ್ದು, 80.21 ಕೋಟಿ ರೂ. ಹಾಗೂ ದಕ್ಷಿಣ ವಿಭಾಗದ ಬ್ರೇಕ್ ವಾಟರ್ 262 ಮೀ. ಉದ್ದವಿದ್ದು, 17.26 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಬಂದರಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿ ಬರ್ತ್ ನಿರ್ಮಾಣ, ಜೆಟ್ಟಿ, ಆಡಳಿತ ಕಚೇರಿ, ಯಾಂತ್ರಿಕ ನಾವೆ ದುರಸ್ತಿ, ಐಸ್ ಫ್ಯಾಕ್ಟರಿ, ಗೋಡೌನ್ ಮತ್ತು ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಲಿದೆ. ನೂತನ ಬಂದರಿನಲ್ಲಿ ಸುಮಾರು 1,700 ಮಂದಿಗೆ ನೇರ ಹಾಗೂ 1,600 ಮಂದಿಗೆ ಪರೋಕ್ಷ ಉದ್ಯೋಗ ಲಭ್ಯವಾಗಲಿದೆ.
ಮೀನುಗಾರಿಕಾ ಬಂದರಿನೊಳಗೆ ಸುಮಾರು 325 ಮಧ್ಯಮ ಮತ್ತು ಆಳ ಸಮುದ್ರ ದೋಣಿಗಳು, 500ಕ್ಕೂ ಅಧಿಕ ಸಾಂಪ್ರದಾಯಿಕ ದೋಣಿಗಳಿಗೆ ತಂಗಲು ವ್ಯವಸ್ಥೆ ಕಲ್ಪಿಸಲಾಗುವುದು. ಮಹಾರಾಷ್ಟ್ರದ ಕಂಪೆನಿ ಗುತ್ತಿಗೆ ವಹಿಸಿಕೊಂಡಿದ್ದು, ಶೀಘ್ರ ಕಾಮಗಾರಿ ಆರಂಭಿಸಲಿದೆ ಎಂದವರು ವಿವರಿಸಿದರು.
ನಾಲ್ಕು ಪಟ್ಟಣ ನಿರ್ವಾಸಿಕರ ಸಂಘದ ಅಧ್ಯಕ್ಷ ಮೋಹನ್ ಕೋಡಿಕಲ್, ಸೋಮನಾಥ ಪಾಂಗಾಲ್, ಶ್ರೀನಿವಾಸ ಪುತ್ರನ್, ತಿಮ್ಮಪ್ಪ ಶ್ರೀಯಾನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







