ಮಹಿಳೆಯರಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಾತಿನಿಧ್ಯ ಸಿಕ್ಕಿಲ್ಲ: ಕೆ.ಎಂ.ಮಂಜುಳಾ
ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು, ಮಾ.2: ಲಿಖಿತ ಸಾಹಿತ್ಯ ದಾಖಲೀಕರಣಕ್ಕೂ ಮುನ್ನ ಮಹಿಳಾ ಸಾಹಿತ್ಯ ರಚನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೆಳೆಂಬುದು ನಿಜವಾದರೂ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳೆಯರಿಗೆ ನಿರೀಕ್ಷಿತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ವಿಷಾದಿಸಿದ್ದಾರೆ.
ನಗರದ ಕುವೆಂಪು ಕಲಾಮಂದಿರದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಸಾಪ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಪ್ರಾಕಾರದ ಸಾಹಿತ್ಯಗಳಿಗೆ ಜಾನಪದವೇ ಮೂಲವಾಗಿದೆ. ಹಿಂದೆ ಜಾನಪದ ಸಾಹಿತ್ಯದಲ್ಲಿ ಮಹಿಳೆಯರು ಹೆಚ್ಚು ಸಕ್ರೀಯರಾಗಿದ್ದಾರೆ. ಸಾಹಿತ್ಯ ಸಂಸ್ಕೃತಿಯ ಹಲವು ಪ್ರಕಾರಗಳು ಮಹಿಳೆಯರಿಂದಲೇ ಜನ್ಮತಾಳಿವೆ ಎಂದ ಅವರು, ಮಹಿಳೆಯರು ಸಾಹಿತ್ಯವನ್ನು ಅಭಿವ್ಯಕ್ತಗೊಳಿಸುವಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಆದರೂ ಮಹಿಳೆಯರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಿಕ್ಕಿರುವ ಪ್ರಾತಿನಿಧ್ಯ ವಿರಳ ಎಂದರು.
ನಾಡಿನ ಸಾಹಿತ್ಯ ಪರಂಪರೆಯ ಮುಂದುವರಿದ ಭಾಗ ವಚನ ಸಾಹಿತ್ಯವಾಗಿದೆ. ವಚನ ಸಾಹಿತ್ಯ ಕಾಲಘಟ್ಟದಲ್ಲೂ ಮಹಿಳೆ ಪ್ರಖರವಾಗಿ ಮಿಂಚಿದ್ದಾಳೆ. ಅಸಮಾನತೆಯ ಕಾಲದಲ್ಲೂ ಮಹಿಳೆ ಲಿಂಗ ತಾರತಮ್ಯ ಹಾಗೂ ಕೌಟುಂಬಿಕ ನಿರ್ಬಂಧಗಳಿಲ್ಲದೇ ವಚನಗಳ ಮೂಲಕ ಭಕ್ತಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾಳೆಂದ ಅವರು, ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಸಾಹಿತ್ಯದಿಂದ ಮಹಾಕಾವ್ಯದವರೆಗೂ ಮಹಿಳೆ ತನ್ನ ಆಲೋಚನೆಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಪಡಿಸಿದ್ದಾಳೆ. ಪ್ರಸಕ್ತ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ ಆಯೋಜಿಸಿರುವುದು, ಮಹಿಳೆಯರ ಸಾಹಿತ್ಯದ ಅಭಿವ್ಯಕ್ತಿಗೆ ಶಕ್ತಿ ನೀಡಿರುವುದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯ ನಿರ್ಲಕ್ಷ್ಯ ಅಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಿಸಿದರು.
ದೇಹದ ಆಕಾರಕ್ಕೆ ಭೌತಿಕ ಚಟುವಟಿಕೆಗಳು ಹೇಗೆ ಅಗತ್ಯವೋ ಮನಸಿನ ಆಕಾರಕ್ಕೆ ಸಾಹಿತ್ಯ ಅಧ್ಯಯನ ಹಾಗೂ ರಚನೆ ಅತ್ಯಗತ್ಯ. ಇದರಿಂದ ಮಹಿಳಾ ಸಶಕ್ತೀಕರಣ ಸಾಧ್ಯ. ಪ್ರಕೃತಿ ಮಹಿಳೆ-ಪುರುಷನಿಗೆ ಯಾವ ತಾರತಮ್ಯವನ್ನೂ ಮಾಡಿಲ್ಲ. ಪುರುಷರಂತೆ ಮಹಿಳೆಯರೂ ತಮ್ಮ ಪ್ರತಿಭೆಗಳನ್ನು ಹೊರಸೂಸಲು ಅವಕಾಶ ನೀಡಿದೆ. ಈ ಅವಕಾಶವನ್ನು ಮಹಿಳೆಯರು ಸುಪಯೋಗಪಡಿಸಿಕೊಳ್ಳಬೇಕೆಂದ ಅವರು, ಆಧುನಿಕ ಯುಗದಲ್ಲಿ ಮಹಿಳಾ ಸಾಹಿತ್ಯ ಹೆಮ್ಮರವಾಗಿ ಬೆಳೆಯುತ್ತಿದೆ. ಇಂತಹ ಸಾಹಿತ್ಯಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ರಾಜ್ಯ ಕಸಾಪದ ಅಧ್ಯಕ್ಷ ಸ್ಥಾನ ಮಹಿಳೆಯರಿಗೂ ಧಕ್ಕವಂತಾಗಬೇಕೆಂದು ಅವರು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್, ಮಹಿಳಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷೆ ಸುಧಾಮೂರ್ತಿ ವಿಶಿಷ್ಟ ಮಹಿಳಾ ಸಾಧಕಿ, ಸಾಹಿತಿಯಾಗಿದ್ದಾರೆ. ಜಾತ್ಯತೀತವಾಗಿ ಅಸಮಾನ್ಯರನ್ನು ತಮ್ಮ ಸಾಹಿತ್ಯದ ಮೂಲಕ ನಾಡಿಗೆ ಪರಿಚಯಿಸಿದ ಕೀರ್ತಿ ಅವರ ಸಾಹಿತ್ಯದ ವಿಶೇಷವಾಗಿದೆ. ನೊಂದವರು, ಶೋಷಿತರು, ಹಿಂದುಳಿದವರು, ದಲಿತ ಮಹಿಳೆಯರ ಸಶಕ್ತೀಕರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಅಸಮಾನ್ಯರ ಬದುಕೇ ಸುಧಾ ಮೂರ್ತಿ ಅವರ ಸಾಹಿತ್ಯವಾಗಿದೆ. ಅವರ ಡಾಲರ್ ಸೊಸೆ, ಅಸಾಮಾನ್ಯ ಸಾಮಾನ್ಯರು ಕೃತಿಗಳಲ್ಲಿ ಮಹಿಳೆಯರಿಂದಲೇ ಮಹಿಳಾ ಶೋಷಣೆ ಮತ್ತು ಅದಕ್ಕಿರುವ ಪರಿಹಾರೋಪಯಾಗಳನ್ನು ಸೂಚಿಸಿದ್ದಾರೆ. ಸಾಹಿತ್ಯವೆಂದರೆ ಬುದುಕು. ಗಾಂಧಿ, ಬಸವ, ಕನಕ, ಕುವೆಂಪು ಅವರ ತತ್ವಗಳಂತೆ ಬದುಕಿರುವ ಸೂಧಾಮೂರ್ತಿ ಅವರ ಬದುಕೇ ಒಂದು ಸಾಹಿತ್ಯ ಎಂದ ಅವರು, ಮಹಿಳಾ ಸಮಾನತೆಗಾಗಿ ಎಲ್ಲರೂ ಮಾತನಾಡುತ್ತಾರೆ. ಆದರೆ ಸುಧಾಮೂರ್ತಿ ಅವರು ಕಾಲೇಜು ವಿದ್ಯಾರ್ಥಿ ಹಂತದಲ್ಲೇ ಮಹಿಳಾ ಸಮಾನತೆಯ ಹೋರಾಟ ಆರಂಭಿಸಿದವರು ಎಂದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರ. ವೇದಗಳ ಕಾಲದಲ್ಲೇ ಗಾರ್ಗಿ ಮೈತ್ರೇಯಿಯಂತಹ ಮಹಿಳೆಯರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಕನ್ನಡ ಸಾಹಿತ್ಯ ಆರಂಭಕ್ಕೆ ಪುರುಷರೊಂದಿಗೆ ಮಹಿಳೆಯರೂ ಕಾರಣರಾಗದಿದ್ದಾರೆ. 11ನೇ ಶತಮಾನದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಲಿತರು ಹಾಗೂ ಹಿಂದುಳಿದ ಸಮುದಾಯದ ಮಹಿಳೆಯರು ಹೆಚ್ಚು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯ ಈ ಸಾಹಿತ್ಯ ಕ್ಷೇತ್ರದ ಪರಂಪರೆ ರಾಜಕೀಯ ಕ್ಷೇತ್ರಕ್ಕೂ ವ್ಯಾಪಿಸಬೇಕು. ಆರ್ಹತೆ, ಪ್ರತಿಭೆ ಇರುವ ಮಹಿಳೆಯರು ನಿರ್ಬಂಧಗಳ ಚೌಕಟ್ಟನ್ನು ಮೀರಿ ನಡೆದಾಗ ಸಾಧನೆ ಸಾಧ್ಯ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಯಾವುದೇ ಕ್ಷೇತ್ರದಲ್ಲೂ ಮಹಿಳೆ ಛಾಪು ಮೂಡಿಸುವುದು ಸುಲಭದ ಮಾತಲ್ಲ. ಪುರುಷ ಪ್ರದಾನ ವ್ಯವಸ್ಥೆಯಲ್ಲಿ ಆತನಿಗೆ ಸ್ಪರ್ಧೆ ನೀಡುವುದು ಸಾಹಸವಾಗಿದ್ದು, ಇದನ್ನೂ ಮೀರಿ ಸಾಧನೆ ಮಾಡಿದವರು ಹಲವಾರು ಸೋಲು, ಅಪಮಾನ, ಶೋಷಣೆಯನ್ನು ಎದುರಿಸಿದವರಾಗಿದ್ದಾರೆ. ಇದು ಐಎಎಸ್, ಐಪಿಎಸ್ ಆಗಿರುವ ಮಹಿಳೆಯರನ್ನೂ ಬಿಟ್ಟಿಲ್ಲ. ಮಹಿಳೆಯರ ಸಾಧನೆ ಪುರುಷರಿಗೆ ಸಹಿಸಲಾಗುತ್ತಿಲ್ಲ. ಮಹಿಳೆಯರಿಗೆ ಡಬಲ್ ಶಕ್ತಿ ಇದೆ. ಆಕೆ ಮನೆಯ ಒಳಗೂ, ಹೊರಗೂ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಬಲ್ಲಳು. ಮಹಿಳೆಗೆ ಪುರುಷರಿಗಿಂತ ಹೆಚ್ಚು ವಿದ್ವತ್ತಿದೆ. ಸೂಕ್ತ ವೇದಿಕೆ, ಅವಕಾಶಗಳ ಅಗತ್ಯವಿದೆ ಎಂದ ಅವರು, ಮಹಿಳೆಯರ ಸಾಹಿತ್ಯವನ್ನು ಉಚಿತವಾಗಿ ಮುದ್ರಣ ಮಾಡುವ ಅವಕಾಶವನ್ನು ರಾಜ್ಯ ಕಸಾಪ ಮಾಡುವ ಮೂಲಕ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹ ನೀಡಬೇಕೆಂದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದರು. ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ರಾಜ್ಯ ಪುಸಕ್ತ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಲೇಖಕಿಯರ ಸಂಘದ ಅಧ್ಯಕ್ಷ ವನಮಾಲಾ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ನಗರಸಭೆ ಅಧ್ಯಕ್ಷ ಶಿಲ್ಪಾ ರಾಜಶೇಖರ್, ಜಿಪಂ ಸದಸ್ಯ ಜಸಂತಾ ಅನಿಲ್ ಕುಮಾರ್, ತುಮಕೂರು ಬರಹಗಾರರ ವೇದಿಕೆಯ ರಮಾಕುಮಾರಿ, ಬೆಳಗಾವಿ ಕಸಾಪದ ಶ್ರೀಶೈಲ, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮತ್ತಿತರರು ಉಪಸ್ಥಿತರಿದ್ದರು. ತಮಿಳ್ ಸೆಲ್ವಿ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಮಹಿಳಾ ಸಾಹಿತಿ ನೇಮಕವಾಗಬೇಕೆಂಬ ಬಗ್ಗೆ ಕಾರ್ಯಕ್ರಮದಲ್ಲಿ ಕೆಲ ಮಹಿಳಾ ಅತಿಥಿಗಳಿಂದ ಕೇಳಿ ಬಂದ ಪ್ರಸ್ತಾಪಕ್ಕೆ ವೇದಿಕೆ ಕಾರ್ಯಕ್ರಮದ ಅರ್ಧದಲ್ಲೇ ಪ್ರತಿಕ್ರಿಯಿಸಿದ ಕಸಾಪ ರಾಜ್ಯ ಅಧ್ಯಕ್ಷ ಡಾ.ಮನುಬಳಿಗಾರ್, ಮಹಿಳಾ ಅಧ್ಯಕ್ಷರ ನೇಮಕಕ್ಕೆ ನಮ್ಮ ವಿರೋಧವಿಲ್ಲ. ಅಧ್ಯಕ್ಷರ ನೇಮಕವಾಗುವುದು ಚುನಾವಣೆ ಮೂಲಕ. ಚುನಾವಣೆಗೆ ಸ್ಪರ್ಧಿಸಿ ಅಧ್ಯಕ್ಷರಾಗಬಹುದು ಎಂದ ಅವರು, ಈ ನಿಟ್ಟಿನಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ರಾಜ್ಯ ಕಸಾಪ ವತಿಯಿಂದ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಾಳೆಯೇ ನಿರ್ಣಯ ಮಂಡಿಸಲಾಗುವುದು ಎಂದರು.
ಭಾರತ ಬದಲಾಗುತ್ತಿರುವುದು ಮಹಿಳೆಯರಿಂದ ಎಂಬುದನ್ನು ವಿಶ್ವಸಂಸ್ಥೆ ಗುರುತಿಸಿದೆ. ದೇಶಾದ್ಯಂತ ಲಕ್ಷಾಂತರ ಮಹಿಳಾ ಸಾಧಕಿಯರು ಪ್ರಸಕ್ತ ಸಾಧನೆಯ ಉತ್ತುಂಗಕ್ಕೇರುತ್ತಿದ್ದಾರೆ. ಸಾಧಕಿ ಮಹಿಳೆಯರಿಗೆ ಸವಾಲುಗಳು ಹೆಚ್ಚಿದ್ದರೂ ಸೂಕ್ತ ಅವಕಾಶಗಳು ಸಿಕ್ಕಿದಲ್ಲಿ ಅವುಗಳನ್ನು ಮೆಟ್ಟಿ ನಿಂತು ಸಾಧಿಸಬಲ್ಲ ಸಾಮಥ್ರ್ಯರ್ಥ್ಯ ಆಕೆಗಿದೆ. ಮಹಿಳೆ ಅಬಲೆಯಲ್ಲ ಅವಳು ಶಕ್ತಿ ಎಂಬುದನ್ನು ನಿರೂಪಿಸುತ್ತಿದ್ದಾಳೆ. ಮಹಿಳೆಯರ ಸಾಧನೆಗೆ ಪುರುಷರ ಸಹಭಾಗಿತ್ವ ಅಗತ್ಯ.
- ರಾಜೇಶ್ವರಿ ತೇಜಸ್ವಿ, ಲೇಖಕಿ ಹಾಗೂ ಪೂರ್ಣಚಂದ್ರ ತೇಜಸ್ವಿ ಪತ್ನಿ






.jpg)
.jpg)

