ಲೇಡಿಗೋಷನ್ ಆಸ್ಪತ್ರೆಯ ನೂತನ ಕಟ್ಟಡ ಲೋಕಾರ್ಪಣೆ
ಎಂಆರ್‌ಪಿಎಲ್-ರಾಜ್ಯ ಸರಕಾರದಿಂದ ಆರ್ಥಿಕ ನೆರವು

ಮಂಗಳೂರು, ಮಾ. 2: ಎಂಆರ್‌ಪಿಎಲ್ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವು ಸೇರಿದಂತೆ ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಒಎನ್‌ಜಿಸಿ-ಎಂಆರ್‌ಪಿಎಲ್ ಆ್ಯನಿವರ್ಸರಿ ವಿಂಗ್ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ನೂತನ ಕಟ್ಟಡವನ್ನು ಇಂದು ಅಂಕಿ ಅಂಶ ಮತ್ತು ಸಾಂಖ್ಯಿಕ ಹಾಗೂ ರಾಸಾಯನಿಕ ಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಲೋಕಾರ್ಪಣೆಗೊಳಿಸಿದರು.
ಲೇಡಿಗೋಶನ್ ಆಸ್ಪತ್ರೆಯ ಹಳೆ ಕಟ್ಟಡದ ಪಕ್ಕದಲ್ಲೇ ನಿರ್ಮಾಣಗೊಂಡಿರುವ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ ಅತ್ಯಾಧುನಿಕವಾಗಿ 260 ಹಾಸಿಗೆಗಳಿಂದ ಕೂಡಿದೆ. ಒಟ್ಟು ಏಳು ಅಂತಸ್ತು ಹೊಂದಿದ್ದು, ಕೆಳ ಅಂತಸ್ತಿನಲ್ಲಿ ವಾಹನ ನಿಲುಗಡೆ, ಪ್ರಥಮ ಅಂತಸ್ತಿನಲ್ಲಿ ಕಚೇರಿ, ಉಳಿದ ಐದು ಅಂತಸ್ತು ಗಳಲ್ಲಿ ರೊಗರೋಗಿ ವಿಭಾಗ, ಪ್ರಸೂತಿ ವಿಭಾಗ, 54 ಬೆಡ್‌ಗಳ ನವಜಾತ ಶಿಶುಗಳ ಆರೈಕೆ ಕೇಂದ್ರ, 5 ಐಸಿಯು ವಾರ್ಡ್, ಹೊರ ರೋಗಿ ವಿಭಾಗ, ಸಾಮಾನ್ಯ ವಾರ್ಡ್, ಪ್ರಯೋಗ ಶಾಲೆ ಸೇರಿದಂತೆ ವಿಶೇಷ ಸವಲತ್ತು, ಸೌಲಭ್ಯಗಳನ್ನು ಹೊಂದಿದೆ. ಪ್ರತಿದಿನ 100ಕ್ಕೂ ಅಧಿಕ ಹೊರರೋಗಿ ಹಾಗೂ 150ಕ್ಕೂ ಅಧಿಕ ಒಳರೋಗಿಗಳ ದಾಖಲಾತಿಗೆ ಅವಕಾಶ ಇದೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್, ಎಂಆರ್‌ಪಿಎಲ್ 31 ಕೋಟಿ ರೂ. ನೀಡಿದರೆ, ಉಳಿದ 20 ಕೋಟಿ ರೂ. ಮೊತ್ತವನ್ನು ರಾಜ್ಯ ಸರ್ಕಾರ ನೀಡಿದೆ ಎಂದರು.
ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಕೇಂದ್ರ ಸರಕಾರ ಆರೋಗ್ಯಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ಮೂರು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲಿ ಆರೋಗ್ಯಕ್ಕಾಗಿ ಶೇ.10ರಿಂದ ಶೇ.30ರಷ್ಟು ವಾರ್ಷಿಕ ಆದಾಯದಲ್ಲಿ ವೆಚ್ಚ ಮಾಡುತ್ತಿರುವುದು ಅರಿವಿಗೆ ಬಂದಿದೆ. ಬಿಪಿಎಲ್‌ಗಿಂತ ಮೇಲ್ಪಟ್ಟ ವರ್ಗ ಆರೋಗ್ಯಕ್ಕಾಗಿ ತಮ್ಮ ಹೆಚ್ಚಿನ ಆದಾಯವನ್ನು ಕಳೆದುಕೊಂಡು ಬಿಪಿಎಲ್ ಮಟ್ಟಕ್ಕೆ ಬರುವ ಪರಿಸ್ತಿತಿ ಇದೆ. ಇದಕ್ಕಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಜನೆರಿಕ್ ಔಷಧ ಮಳಿಗೆ, ಆಯುಷ್ಮಾನ್ ಭಾರತ್ ಯೋಜನೆ ಜತೆಗೆ ದೇಶದಲ್ಲಿ 14 ಹೊಸ ಏಮ್ಸ್ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದೆ ಎಂದವರು ಹೇಳಿದರು.
ಪ್ರಯೋಗ ಶಾಲೆ ಉದ್ಘಾಟಿಸಿದ ಕೇಂದ್ರ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ವೀರಪ್ಪ ಮೊಯ್ಲಿ, ಈ ಆಸ್ಪತ್ರೆಯ ಸಂಪೂರ್ಣ ನಿರ್ವಹಣೆಯನ್ನು ಒಎನ್‌ಜಿಸಿ-ಎಂಆರ್‌ಪಿಎಲ್ ವಹಿಸಿಕೊಂಡು ಇದನ್ನು ವಿಶೇಷ ಆಸ್ಪತ್ರೆಯಾಗಿ ಪರಿಗಣಿಸಬೇಕು ಎಂದರು.
ಐಸಿಯು ವಿಭಾಗ ಉದ್ಘಾಟಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಆಯುಷ್ಮಾನ್ ಯೋಜನೆಯನ್ನು ತಾಲೂಕು ಮಟ್ಟಕ್ಕೆ ವಿಸ್ತರಿಸಬೇಕು. ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಪೂರೈಸಿದವರು ಲೇಡಿಗೋಷನ್‌ನಲ್ಲಿ ಒಂದು ವರ್ಷ ಸೇವೆ ಸಲ್ಲಿಸುವಂತಾಗಬೇಕು. ಹಳೆ ಕಟ್ಟಡದಲ್ಲಿ ರೋಗಿಗಳ ಸಂಬಂಧಿಕರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಎಂಆರ್‌ಪಿಎಲ್ ಈ ಆಸ್ಪತ್ರೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಇದರ ನಿರ್ವಹಣೆಗೆ ಕೂಡ ಮುಂದಾಗಬೇಕು ಎಂದರು.
ವೆನ್ಲಾಕ್ ಸರ್ಕಾರಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲು ಅನಿವಾಸಿ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಅವರಿಗೆ ಹಸ್ತಾಂತರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಜೊತೆಗೆ ಮಾತನಾಡಿದ್ದು, ಲೋಕಸಭಾ ಚುನಾವಣೆ ಬಳಿಕ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚುವರಿ ಐಸಿಯು ಬೆಡ್ ಸ್ಥಾಪನೆಗೆ 25 ಕೋಟಿ ರೂ. ಅನುದಾನದ ಭರವಸೆ ನೀಡಿದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ರಮಾನಾಥ ರೈ, ಅಮರನಾಥ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್, ಕೆಎಂಸಿ ಆಸ್ಪತ್ರೆ ಡೀನ್ ಡಾ.ವೆಂಕಟ್ರಾಯ ಪ್ರಭು, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪಾಲಿಕೆ ಸದಸ್ಯೆ ಪೂರ್ಣಿಮಾ ಮಾತನಾಡಿದರು.
ಪ್ರಧಾನ ವ್ಯವಸ್ಥಾಪಕ ಪ್ರಸಾದ್ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು. ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕಿ ಡಾ. ಸವಿತಾ ವಂದಿಸಿದರು.







