ಹೆಣದ ಮೇಲೆ ರಾಜಕೀಯ ಲಾಭಕ್ಕೆ ಬಿಜೆಪಿ ಯತ್ನ: ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ, ಮಾ.2: ನಮ್ಮ ಸೈನಿಕರ ತ್ಯಾಗ ಚುನಾವಣಾ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ದುರದೃಷ್ಟಕರ. ಬೇರೆಯವರ ಹೆಣದ ಮೇಲೆ ರಾಜಕೀಯ ಲಾಭ ಮಾಡಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಮೇಲೆ ನಡೆದ ವೈಮಾನಿಕ ದಾಳಿಯ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ದೇಶದ ಗಡಿಯಲ್ಲಿರುವ ಸೈನಿಕರ ತ್ಯಾಗ-ಬಲಿದಾನಗಳನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದ ಅವರು, ಇದೇ ವೇಳೆ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಚೆನ್ನೈನಲ್ಲಿ ಮೋದಿ ಒಂದು ಹೇಳಿಕೆ ನೀಡಿದರೆ, ಇಲ್ಲಿ ಯಡಿಯೂರಪ್ಪ ಮತ್ತೊಂದು ಹೇಳಿಕೆ ನೀಡುತ್ತಾರೆ. ಪಾಕಿಸ್ತಾನದ ವಿರುದ್ಧದ ಸೇನಾ ಕಾರ್ಯಾಚರಣೆಯಿಂದಾಗಿ ರಾಜ್ಯದಲ್ಲಿ ಕನಿಷ್ಠ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆಯೂ ನಾಚಿಕೆಗೇಡಿನ ಸಂಗತಿ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ದೇಶವು ಚುನಾವಣೆಯ ಹೊಸ್ತಿಲಿನಲ್ಲಿರುವಾಗ ರಾಜಕೀಯ ನಾಯಕರು ಇಂತಹ ಹೇಳಿಕೆಗಳನ್ನು ನೀಡುವುದು ಯಾರಿಗೂ ಶೋಭೆ ತರುವುದಿಲ್ಲ. ದೇಶದ ರಕ್ಷಣೆಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದ ಅವರು, ವಿಂಗ್ ಕಮಾಂಡರ್ ಅಭಿನಂದನ್ ದೇಶಕ್ಕೆ ಸುರಕ್ಷಿತವಾಗಿ ಮರಳಿರುವುದು ಸ್ವಾಗತಾರ್ಹ ಎಂದರು.
ಪಾಕಿಸ್ತಾನದ ಸೇನೆಯಿಂದ ನಿರಂತರವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಗುಪ್ತಚರ ಇಲಾಖೆಗಳು ಗಂಭೀರ ಚಿಂತನೆ ಮಾಡಿ, ದೇಶಕ್ಕೆ ಒಳ್ಳೆಯದಾಗುವ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ನಮ್ಮ ಸೈನಿಕರು ಹುತಾತ್ಮರಾದ ವೇಳೆ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಸರಿಯೇ, ಇದು ನಿಜವಾಗಿ ಬೇಸರ ತರುವಂತಹ ಮಾತು, ಪದೇ ಪದೇ ನಮ್ಮ ಮೇಲೆ ದಾಳಿ ಮಾಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು. ಅದನ್ನು ಬಿಟ್ಟು ಈ ರೀತಿಯ ಮಾತುಗಳನ್ನು ಆಡುವುದು ಸರಿಯಲ್ಲ ಎಂದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ನಮ್ಮ ಗಡಿ ಭಾಗದಲ್ಲಿ ಮೊದಲಿನಿಂದಲೂ ದಾಳಿ ಮಾಡುತ್ತಿದ್ದಾರೆ. ನಮ್ಮ ಸೈನಿಕರು ಎಚ್ಚರಿಕೆಯಿಂದಿದ್ದು, ಪಾಕಿಸ್ತಾನದ ಸೇನೆಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಹಿಂದಿನ ಸರಕಾರ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರಲಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೂ, ಪ್ರತಿ ಮಾತಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ.
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ನಾಯಕ







