ಉಗ್ರನೆಲೆಗಳ ಮೇಲೆ ವಾಯುಪಡೆ ದಾಳಿಯಲ್ಲಿ ಯಾರೂ ಸತ್ತಿಲ್ಲ: ಕೇಂದ್ರ ಸಚಿವ ಅಹ್ಲುವಾಲಿಯಾ !

ಹೊಸದಿಲ್ಲಿ, ಮಾ.2: ಪಾಕಿಸ್ತಾನದ ಉಗ್ರತಾಣಗಳ ಮೇಲೆ ಭಾರತೀಯ ವಾಯುಪಡೆ ನಡೆಸಿರುವ ದಾಳಿಯಲ್ಲಿ ಯಾರೂ ಸತ್ತಿಲ್ಲ ಎಂದು ಕೇಂದ್ರ ಸಹಾಯಕ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಎಸ್. ಅಹ್ಲುವಾಲಿಯಾ ಹೇಳಿದ್ದಾರೆ ಎಂದು deccanherald.com ವರದಿ ಮಾಡಿದೆ.
ಕೇಂದ್ರ ಸರಕಾರವು ವಾಯುದಾಳಿಯಲ್ಲಿ ಯಾವುದೇ ಸಾವನ್ನು ಬಯಸಿರಲಿಲ್ಲ ಎಂದೂ ಅವರು ಹೇಳಿದ್ದಾರೆ ಎನ್ನಲಾಗಿದೆ. ಕೇಂದ್ರ ಸಚಿವರ ಈ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದು, ಸಚಿವರು ವಿಡಿಯೋದಲ್ಲಿ ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.
“ಬಾಂಬ್ ದಾಳಿ ನಡೆಸಿ ಉಗ್ರರ ತಾಣಗಳನ್ನು ನಾಶಗೊಳಿಸಲು ನಾವು ಶಕ್ತರಾಗಿದ್ದೇವೆ ಎಂದು ಅವರಿಗೆ ತೋರಿಸುವುದು ಮಾತ್ರ ನಮ್ಮ ಉದ್ದೇಶವಾದದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ. ಇದು ಅಗತ್ಯವಾದ ಹೆಜ್ಜೆಯಾಗಿತ್ತು” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಹ್ಲುವಾಲಿಯಾ ಹೇಳಿದರು.
“ಪಾಕಿಸ್ತಾನದ ಕಣ್ಗಾವಲಿದ್ದರೂ ಅವರು ತಂಗಿದ್ದ ಪ್ರದೇಶವನ್ನು ನಾವು ಗುರುತಿಸಬಲ್ಲೆವು ಮತ್ತು ಅದನ್ನು ನಾಶಪಡಿಸಬಲ್ಲೆವು ಎಂದು ನಿರೂಪಿಸಲು ಇದು ಅಗತ್ಯವಾಗಿದೆ. ನಾವು ಯಾವುದೇ ಪ್ರಾಣಹಾನಿಯನ್ನು ಬಯಸಿರಲಿಲ್ಲ” ಎಂದವರು ಹೇಳಿದರು.
“ಭಾರತ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳನ್ನು ನಾನು ನೋಡಿದೆ, ನಾನು ಪ್ರಧಾನಿ ಮೋದಿಯವರ ಭಾಷಣವನ್ನು ಕೇಳಿದ್ದೇನೆ. ವಾಯುಪಡೆಯ ದಾಳಿಯ ನಂತರ ಅವರು ರಾಜಸ್ತಾನದ ಚುರುವಿನಲ್ಲಿ ಭಾಷಣ ಮಾಡಿದ್ದರು. 300 ಜನರು ಸತ್ತಿದ್ದಾರೆ ಎಂದವರು ಹೇಳಿದರೇ?, ಯಾರಾದರೂ ವಕ್ತಾರರು ಹೇಳಿದರೇ? ಅಮಿತ್ ಶಾ ಹೇಳಿದರೇ?” ಎಂದು ಅಹ್ಲುವಾಲಿಯಾ ಪ್ರಶ್ನಿಸಿದರು.
ಉಗ್ರರ ಸಾವಿನ ಸಂಖ್ಯೆಯನ್ನು ಈವರೆಗೆ ದೃಢಪಡಿಸದ ಕೇಂದ್ರ
ಪಾಕಿಸ್ತಾನದ ಖೈಬರ್‌ಪಖ್ತೂಂಖ್ವಾ ಪ್ರಾಂತದಲ್ಲಿ ನಡೆದ ಜೈಶೆ ಮುಹಮ್ಮದ್ ಉಗ್ರಗಾಮಿ ಶಿಬಿರಗಳ ಮೇಲೆ ನಡೆದ ದಾಳಿಯಲ್ಲಿ 350 ಮಂದಿ ಉಗ್ರರು ಹತರಾಗಿದ್ದಾರೆಂದು ಬಹುತೇಕ ಭಾರತೀಯ ಸುದ್ದಿಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಅವುಗಳನ್ನು ಭಾರತೀಯ ವಾಯುಪಡೆ ಅಥವಾ ಕೇಂದ್ರ ಸರಕಾರವು ಈವರೆಗೆ ದೃಢೀಕರಿಸದಿರುವುದರಿಂದ ಅಹ್ಲುವಾಲಿಯಾ ಅವರ ಈ ಹೇಳಿಕೆಯು ಹೆಚ್ಚಿನ ಮಹತ್ವವನ್ನು ಪಡೆದಿದೆ.







