ಕಾರ್ಕಳ: ಹಾವು-ನಾವು ಪ್ರಾತ್ಯಕ್ಷಿಕ್ಷೆ

ಕಾರ್ಕಳ, ಮಾ. 2: ಯಾವುದೇ ಜೀವಿಗಳ ಬಗ್ಗೆ ನಂಬಿಕೆ ಇರಬೇಕೆ ಹೊರತು ಮೂಢನಂಬಿಕೆಯಲ್ಲ. ಹಾವುಗಳು ತುಂಬಾ ಮೃದು ಸ್ವಭಾವ ಹಾಗೂ ಮುಗ್ಧ ಜೀವಿಗಳು. ಅದು ಮನುಷ್ಯರ ಸ್ಪರ್ಶ ಬಯಸುವುದಿಲ್ಲ. ಮನುಷ್ಯರ ಪ್ರೀತಿ, ಅನುಕಂಪ, ಕರುಣೆಯನ್ನು ಗ್ರಹಿಸುತ್ತವೆ. ಕೆಲವು ಹಾವುಗಳ ಬಗ್ಗೆ ತಪ್ಪು ನಂಬಿಕೆಗಳಿವೆ ಎಂದು ಉಡುಪಿಯ ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದ್ದಾರೆ.
ಅವರು ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ಸಂಘ ಹಾಗೂ ಪ್ರಾಣಿಶಾಸ್ತ್ರ ವಿಭಾಗದಿಂದ ನಡೆದ ಹಾವು-ನಾವು ಪ್ರಾತ್ಯಕ್ಷಿಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾವು ಕಚ್ಚಿದ ವ್ಯಕ್ತಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿಸಿದ ಅವರು, ಹಾವು ಕಚ್ಚಿದ ವ್ಯಕ್ತಿಗೆ ಮೊದಲಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಕಣ್ಣುಗಳು ಮಂಜಾಗಲು ಪ್ರಾರಂಭವಾಗುವ ಮುನ್ನ ಹಾವು ಕಚ್ಚಿದ ಮೇಲಿನ ಭಾಗಕ್ಕೆ ಹಾಗೂ ಕೆಳಗಿನ ಭಾಗಕ್ಕೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿ ಪ್ರಥಮ ಚಿಕಿತ್ಸೆ ಮಾಡಿ ಅರ್ಧ ಗಂಟೆಯೊಳಗೆ ಆಸ್ಪತ್ರೆಗೆ ಸೇರಿಸಬೇಕು ಎಂದರು.
ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಈಶ್ವರ ಭಟ್, ಭೌತಶಾಸ್ತ್ರ ಮುಖ್ಯಸ್ಥ ಉಪನ್ಯಾಸಕ ಟಿ.ಎಂ ಆನಂದ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಿಯ ನಾಯಕ್ ಸ್ವಾಗತಿಸಿದರು. ಅನುಪಮ ಕಾರ್ಯಕ್ರಮ ನಿರೂಪಿಸಿದರು.







