ಕೋಟಿ ಹಣ ಬಂದರೂ ಅದು ನಮ್ಮ ಜೊತೆ ಮಾತನಾಡುತ್ತಾ?: ಮಗನನ್ನು ನೆನೆದು ಕಣ್ಣೀರಿಟ್ಟ ಯೋಧ ಗುರು ತಾಯಿ

ಮಂಡ್ಯ, ಫೆ, 2: ನನ್ನ ಮಗನ ಕೈಯ್ಯೋ ಕಾಲೋ ಮುರಿದು ಒಂದು ಮೂಲೆಯಲ್ಲಿ ಬಿದ್ದಿದ್ರೆ, ಅಮ್ಮ ನಾನಿದ್ದೀನಿ ಅನ್ನುತ್ತಿರಲಿಲ್ಲವೆ? ಎಷ್ಟೇ ಕೋಟಿ ಹಣ ಬಂದರು ಅದು ನಮ್ಮ ಜೊತೆ ಮಾತನಾಡುತ್ತಾ? ಅಮ್ಮ, ಹೆಂಡತಿ ಎಂದು ಕರೆಯುತ್ತಾ? ಎಂದು ಹುತಾತ್ಮ ಯೋಧ ಗುರು ತಾಯಿ ಚಿಕ್ಕತಾಯಮ್ಮ ಕಣ್ಣೀರಿಟ್ಟಿದ್ದಾರೆ.
ತಮ್ಮ ಕುಟುಂದಲ್ಲಿ ಹಣಕಾಸಿನ ವಿಚಾರದಲ್ಲಿ ಜಗಳ ನಡೆದಿದೆ ಎಂಬ ಅಪಪ್ರಚಾರದ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಒಂದು ದಿನವೂ ನಾವು ಜಗಳ ಆಡಿದವರಲ್ಲ. ನನ್ನ ಮುಖ ನೋಡಿದರೆ ಅವಳು (ಸೊಸೆ) ಅಳುತ್ತಾಳೆ, ಅವಳ ಮುಖ ನೋಡಿ ನಾನು ಆಳುತ್ತೇನೆ ಎಂದರು.
ನಾವು ಅನ್ನ ತಿನ್ನೋ ಸ್ಥಿತಿಯಲ್ಲಿರಲಿಲ್ಲ, ಬೇರೆಯವರು ತಿನ್ನಿಸುತ್ತಿದ್ದರು. ಈಗ ಸುಧಾರಿಸಿಕೊಳ್ಳುತ್ತಿದ್ದೇವೆ. ಇಂತಹ ಅಪವಾದ, ಈ ಕಪ್ಪು ಚುಕ್ಕೆಯನ್ನು ಅಳಿಸಿ ಕೊಡಿ ಎಂದು ಮಾಧ್ಯಮದವರನ್ನು ಅವರು ಮನವಿ ಮಾಡಿದರು.
ಗುರು ಪತ್ನಿ ಕಲಾವತಿ ಮಾತನಾಡಿ, ಮದುವೆ ವಿಚಾರದಲ್ಲಾಗಲೀ ಅಥವಾ ಹಣಕಾಸಿನ ವಿಷಯದಲ್ಲಾಗಲೀ ಜಗಳವಾಡಿಲ್ಲ. ನಮ್ಮ ಕುಟುಂಬದಲ್ಲಿ ಆ ರೀತಿಯ ಯಾವುದೇ ಘಟನೆ ನಡೆದಿಲ್ಲ. ನಮ್ಮ ಕುಟುಂಬಕ್ಕೆ ಸಹಾಯ ಮಾಡುತ್ತಿರುವುದನ್ನು ನೋಡಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕಷ್ಟದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಅಭಾರಿಯಾಗಿದ್ದೇವೆ ಎಂದರು.





