ಮಕ್ಕಳಲ್ಲಿ ಜಾತಿಯ ಬೀಜ ಬಿತ್ತುವುದು ಸರಿಯಲ್ಲ: ಲೇಖಕ ಸಿ.ಜಿ.ಲಕ್ಷ್ಮೀಪತಿ
ಬೆಂಗಳೂರು, ಮಾ.2: ಮನೆಗಳಲ್ಲಿ ಪೋಷಕರಾದ ನಾವು ಮಗು ಹುಟ್ಟಿದಾಗಿನಿಂದ ಬೆಳೆಯುತ್ತಾ ನೀನು ಇದನ್ನು ಮಾಡಬಾರದು, ನೀನಿದನ್ನು ತಿನ್ನಬಾರದು, ನೀನದನ್ನು ಮುಟ್ಟಬಾರದು ಎಂದು ಹೇಳಿಕೊಡುತ್ತಿದ್ದೇವೆ. ಅಷ್ಟೇ ಅಲ್ಲದೆ, ನೀನು ಇಂತಹ ಆಹಾರವನ್ನೇ ಸೇವನೆ ಮಾಡಬೇಕು, ಇಂತಹವರ ಜತೆಯೇ ಸ್ನೇಹ ಮಾಡಬೇಕು ಎಂದು ಪಾಠ ಮಾಡುತ್ತಿದ್ದೇವೆ. ಈ ಮೂಲಕ ಮಕ್ಕಳಲ್ಲಿ ಜಾತಿಯ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದೇವೆ, ಅದು ಸರಿಯಲ್ಲ ಎಂದು ಲೇಖಕ ಸಿ.ಜಿ.ಲಕ್ಷ್ಮೀಪತಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಜೈಭೀಮ್ ಭವನದಲ್ಲಿ ಬಯಲು ಬಳಗದ ವತಿಯಿಂದ ಆಯೋಜಿಸಿದ್ದ ಕಾನ್ವರ್ಸೆಷನ್ಸ್ ಅನ್ ಕಾಸ್ಟ್ ಡಿಸ್ಕ್ರಿಮಿನೇಷನ್ ಇನ್ ಸೌಥ್ ಇಂಡಿಯಾ ಕುರಿತ ಚರ್ಚೆ ಹಾಗೂ ರೂಮಿ ಹರೀಶ್ ಹಾಗೂ ಸುನೀಲ್ ಅವರ ತಂಡ ರಚಿಸಿರುವ ವರದಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಗುವಿಗೆ ಒಂದು ವರ್ಷದಿಂದ ಐದು ವರ್ಷದವರೆಗೆ ಮನೆಯಲ್ಲಿ ಪೋಷಕರು ಕಲಿಸುವುದನ್ನು ಎಂದಿಗೂ ಅಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಈ ಹಂತದಲ್ಲಿಯೇ ಮಕ್ಕಳಿಗೆ ಜಾತಿಯ ಮನಸ್ಥಿತಿಯನ್ನು ಅಳಿಸಲು ಮುಂದಾಗಬೇಕು. ಮಕ್ಕಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಗುಣಗಳನ್ನು ಬೆಳೆಸುವಂತಾಗಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಜಾತಿ ಎಂಬ ಪಿಡುಗು ಅತ್ಯಂತ ಭಯಾನಕವಾಗಿ ಬೆಳೆದು ನಿಂತಿದೆ. ನಮ್ಮ ಅಸ್ತಿತ್ವವೇ ಭಯ ಹುಟ್ಟಿಸುವಂತಿದೆ. ಬಳಸುವ ಭಾಷೆ, ಆಹಾರ, ಮಾತನಾಡುವ ಶೈಲಿ, ಹೇಳುವ ವಿಧಾನಗಳಿಂದ ಜಾತಿಯನ್ನು ಗುರುತಿಸುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಬೇಕಾದರೂ ಜಾತಿಯಿಂದ ನಮ್ಮನ್ನು ಕೀಳಾಗಿ ಕಾಣಬಹುದಾದ ಸ್ಥಿತಿಯಲ್ಲಿದ್ದೇವೆ. ಪ್ರತಿಯೊಂದು ಜಾತಿಯೂ ಪ್ರತ್ಯೇಕ ವಿಶ್ವದಂತೆ ಭಾವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಜೀವನದಲ್ಲಿ ಜಾತೀಯತೆಯನ್ನು ಪ್ರಶ್ನಿಸುತ್ತಾರೆ. ಆದರೆ, ಅದನ್ನು ಅನುಸರಿಸುವುದಿಲ್ಲ. ಅಂಬೇಡ್ಕರ್ ಬಗ್ಗೆ ಬಗೆ ಬಗೆಯ ಭಾಷಣ ಮಾಡುತ್ತಾರೆ, ಅವರು ಹೇಳಿದ್ದನ್ನು ಅಳವಡಿಸಿಕೊಳ್ಳುವುದಿಲ್ಲ. ಹೀಗಾಗಿ, ಪ್ರತಿಯೊಬ್ಬರೂ ಜಾತಿಯ ಕುರಿತು ಸೂಕ್ಷ್ಮಗೊಳ್ಳಬೇಕು. ನಮ್ಮನ್ನು ನಾವು ಪ್ರೀತಿಸಬೇಕು, ಬೇರೆಯವರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತೆ ಸೆಂದಲಿರ್ ಮಾತನಾಡಿ, ದೇಶದಲ್ಲಿ ದಲಿತರು, ಅಸ್ಪೃಶ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳು ಪೊಲೀಸ್ ಠಾಣೆಗಳವರೆಗೂ ಬರುತ್ತಿಲ್ಲ. ಒಂದು ವೇಳೆ ಪೊಲೀಸ್ ಠಾಣೆಗೆ ಬಂದರೆ ಅಲ್ಲಿ ಈ ಸಂಬಂಧ ಪ್ರಕರಣವೂ ದಾಖಲಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅಂದರೆ, ಆಡಳಿತ ವ್ಯವಸ್ಥೆ, ಪೊಲೀಸ್ ಇಲಾಖೆಯು ಯಾರ ಪರ ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಬೇಕಿದೆ ಎಂದರು.
ರೂಮಿ ಹಾಗೂ ಸುನಿಲ್‌ರ ತಂಡ ಮಾಡಿರುವ ಪ್ರಯತ್ನ ವಿಶಿಷ್ಟವಾಗಿದೆ. ದಕ್ಷಿಣ ಭಾರತದಲ್ಲಿನ ಎಲ್ಲ ಜಾತಿಗಳವರನ್ನು ಭೇಟಿ ಮಾಡಿ ವಿಶೇಷವಾದ ವರದಿ ತಯಾರಿಸಿದ್ದಾರೆ. ಇದರಲ್ಲಿ ಇಲ್ಲಿನ ಶೋಷಿತರ ಅನಾನುಕೂಲತೆ, ನೋವು, ನಲಿವು, ಪರಿಹಾರ ಕುರಿತಂತೆ ಚಿತ್ರಿಸಲಾಗಿದೆ. ಅಲ್ಲದೆ, ಅನ್ಯಾಯಕ್ಕೆ ಒಳಗಾಗುವವರಿಗೆ ಎಷ್ಟರ ಮಟ್ಟಿಗೆ ಕಾನೂನಿನ ಅರಿವಿದೆ ಎಂಬುದನ್ನೂ ಇದರಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದರು.
ಒಂದು ಸಮುದಾಯದ ತಾರತಮ್ಯವಷ್ಟೇ ಅಲ್ಲದೆ, ಎಲ್ಲ ಸಮುದಾಯಗಳಲ್ಲಿನ ತಾರತಮ್ಯದ ಬಗ್ಗೆ ಚರ್ಚೆಯಾಗಬೇಕಿದೆ. ಈ ನಿಟ್ಟಿನಲ್ಲಿ 2015 ರಿಂದ ಆರಂಭ ಮಾಡಿ ಸರಿಸುಮಾರು ಐದು ವರ್ಷಗಳ ಕಾಲ ಐದು ರಾಜ್ಯಗಳ 98ಕ್ಕೂ ಅಧಿಕ ಜನರನ್ನು ಭೇಟಿ ಮಾಡಿ, ಮಾತನಾಡಿ ವರದಿ ತಯಾರಿಸಲಾಗಿದೆ. ಎಲ್ಲದರ ಬಗ್ಗೆಯೂ ಚರ್ಚೆಯಾಗಬೇಕು ಎಂಬ ಉದ್ದೇಶದಿಂದ ಈ ವರದಿ ಸಾಕಾರವಾಗಲಿದೆ.
- ಸುನಿಲ್ ಮೋಹನ್, ವರದಿ ತಯಾರಿಸಿದವರಲ್ಲಿ ಒಬ್ಬರು







