ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಯಲ್ಲಿ ಸೂಲಿಬೆಲೆಯ ರಾಜಕೀಯ ಭಾಷಣಕ್ಕೆ ಅವಕಾಶ: ಪ್ರಾಂಶುಪಾಲರ ವಿರುದ್ಧ ಆಕ್ರೋಶ
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ

ಕುಂದಾಪುರ, ಮಾ. 2: ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಫೆ.25 ರಂದು ನಡೆದ ಹುತಾತ್ಮ ಸೈನಿಕರಿಗೆ ಶ್ರದ್ದಾಂಜಲಿ ಅರ್ಪಿಸುವ ಕಾರ್ಯ ಕ್ರಮದಲ್ಲಿ ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿದ್ಯಾರ್ಥಿಗಳನ್ನುದ್ದೇಶಿಸಿ ರಾಜಕೀಯ ಪ್ರೇರಿತ ಭಾಷಣ ಮಾಡಿರುವುದಾಗಿ ಆರೋಪಿಸಿ, ಇದಕ್ಕೆ ಅವಕಾಶ ಮಾಡಿ ಕೊಟ್ಟ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಸಂಬಂಧ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದ ಮುಖಂಡರು, ಹಳೆ ವಿದ್ಯಾರ್ಥಿಗಳು ಶುಕ್ರವಾರ ಕುಂದಾಪುರದಲ್ಲಿ ಸಭೆ ಕರೆದು ಮುಂದಿನ ಹೋರಾಟದ ಕುರಿತು ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಪ್ರಗತಿಪರ ಚಿಂತಕ, ಪತ್ರಕರ್ತ ಶಶಿಧರ ಹೆಮ್ಮಾಡಿ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ರಾಜ್ಯದ ಯುವಜನರ ಮನಸ್ಸನ್ನು ಹಾಳು ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಪ್ರತಿ ಸಂದರ್ಭಗಳಲ್ಲೂ ಸುಳ್ಳುಗಳನ್ನು ಪೋಣಿಸಿ ಯಾವುದೇ ಆಧಾರವಿಲ್ಲದೆ ಕೇವಲ ಕತೆಗಳನ್ನು ಹೇಳುತ್ತ ಮೋದಿ ಹಾಗೂ ಬಿಜೆಪಿ ಎಂದು ಹೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇಂತಹ ವ್ಯಕ್ತಿ ಯನ್ನು ಕಾಲೇಜಿಗೆ ಕರೆಸಿ ಉಪನ್ಯಾಸ ನೀಡಲು ಅನುವು ಮಾಡಿಕೊಟ್ಟಿರುವುದು ಅಕ್ಷಮ್ಯ ಎಂದು ಆರೋಪಿಸಿದರು.
ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದ ಕಾಲೇಜಿನಲ್ಲಿ ಚಕ್ರವರ್ತಿ ಸೂಲಿ ಬೆಲೆಯಂತಹ ಅಪ್ಪಟ ಚುನಾವಣಾ ಭಾಷಣಕಾರನನ್ನು ಕರೆಸಿ ಸಾವಿರಾರು ವಿದ್ಯಾರ್ಥಿಗಳ ಮುಂದೆ ಸುಳ್ಳುಗಳನ್ನು ಪೋಣಿಸಿ ಹೇಳುವ ಕಾರ್ಯಕ್ಕೆ ಕಾಲೇಜು ಪ್ರಾಂಶುಪಾಲ ನಾರಾಯಣ ಶೆಟ್ಟಿ ಕೈ ಹಾಕಿದ್ದಾರೆ. ಇದೇ ಕಾರಣಕ್ಕೆ ನಾವೆಲ್ಲರೂ ಪ್ರಾಂಶುಪಾಲರಿಗೆ ಫೋನ್ ಕರೆ ಮಾಡುವ ಮೂಲಕ ಚಳವಳಿ ಆರಂಭಿಸಿದ್ದೇವೆ ಎಂದು ಅವರು ತಿಳಿಸಿದರು.
ಚಿಂತಕ ರಾಮಕೃಷ್ಣ ಹೇರಳೆ ಮಾತನಾಡಿ, ಇದೊಂದು ಸಾಮುದಾಯಿಕ ನೇತೃತ್ವದ ರೂಪದಲ್ಲಿ ವಿಷಯಾಧಾರಿತವಾಗಿ ಚರ್ಚಿಸಿ ಮುಂದಿನ ಹೋರಾಟ ಗಳ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಕಾಲೇಜು ಕ್ಯಾಂಪಸ್‌ನ್ನು ಯಾವುದೇ ರಾಜಕೀಯ ಪಕ್ಷದ ತರಬೇತಿ ಕ್ಯಾಂಪ್ ಆಗಿ ಬಳಕೆಯಾಗುವುದರ ಬಗ್ಗೆ ತೀವ್ರ ಆಕ್ಷೇಪವಿದೆ. ನಾವು ಕಲಿತ, ಸಮಾಜದಲ್ಲಿ ನಮಗೊಂದು ಸ್ಥಾನಮಾನ ನೀಡಿದ ಹೆಮ್ಮೆಯ ಕಾಲೇಜು ಇಂದು ಇಂತಹ ಮಟ್ಟಕ್ಕೆ ತಲುಪಿರುವುದು ದುರಂತ ಎಂದರು.
ಸಭೆಯಲ್ಲಿ ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಎಚ್.ನರಸಿಂಹ, ವಿನೋದ್ ಕ್ರಾಸ್ತಾ, ದೀಪಕ್ ನಾವುಂದ, ರಮೇಶ್ ಶೆಟ್ಟಿ ವಕ್ವಾಡಿ, ಹುಸೈನ್ ಹೈಕಾಡಿ, ಚಂದ್ರಶೇಖರ ಶೆಟ್ಟಿ, ರಾಜೇಶ ವಡೇರಹೋಬಳಿ, ಚಂದ್ರಶೇಖರ ಖಾರ್ವಿ, ಪ್ರಭಾಕರ ಕೋಡಿ, ಗಣೇಶ್ ಮೆಂಡನ್, ಜಾನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಕ್ಷಮೆಯಾಚನೆಗೆ ಒತ್ತಾಯ
ಬಳಿಕ ನಿಯೋಗವೊಂದು ಕಾಲೇಜಿಗೆ ತೆರಳಿ ಪ್ರಾಂಶುಪಾಲರನ್ನು ಭೇಟಿ ಮಾಡಿ ವಿದ್ಯಾರ್ಥಿಗಳೆದುರು ಸೂಲಿಬೆಲೆಯವರನ್ನು ಕರೆಸಿ ಭಾಷಣ ಮಾಡಲು ಅನುವು ಮಾಡಿಕೊಟ್ಟಿರುವುದಕ್ಕೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತು. ಈ ವಿಚಾರದಲ್ಲಿ ಪ್ರಾಂಶುಪಾಲರು ಹಾಗೂ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಮುಖಂಡರು ಪ್ರಾಂಶುಪಾಲರ ಕೊಠಡಿಯಿಂದ ವಾಪಾಸ್ಸಾಗಿ ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ನಡೆಸಿದರು.







