ಮಣಿಪಾಲ: ಮಂಗನ ಕಾಯಿಲೆಗೆ ಸಾಗರದ ಮಹಿಳೆ ಬಲಿ

ಮಣಿಪಾಲ, ಮಾ.1: ಮಂಗನ ಕಾಯಿಲೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತಿದ್ದ ಸಾಗರದ ಮಹಿಳೆಯೊಬ್ಬರು ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
38 ವರ್ಷದ ಪೂರ್ಣಿಮಾ ಎಂಬ ಸಾಗರ ತಾಲೂಕಿನ ರೋಗಿಯೊಬ್ಬರು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ. ಈ ಮೂಲಕ ಮಂಗನಕಾಯಿಲೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಧಿಕೃತವಾಗಿ ಬಲಿಯಾದವರ ಸಂಖ್ಯೆ 10ಕ್ಕೇರಿದೆ. ಇವರಲ್ಲಿ ನಾಲ್ವರು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಿನ್ನೆ ಮತ್ತು ಇಂದು ಯಾವುದೇ ಮಂಗಗಳ ಸಾವು ವರದಿಯಾಗಿಲ್ಲ. ಈವರೆಗೆ ಜಿಲ್ಲೆಯಲ್ಲಿ 202 ಮಂಗಗಳ ಕಳೇಬರ ಪತ್ತೆಯಾ ಗಿದ್ದು, ಇವುಗಳಲ್ಲಿ 14 ಮಂಗಗಳಲ್ಲಿ ಮಾತ್ರ ಕೆಎಫ್‌ಡಿ ವೈರಸ್ ಸೋಂಕು ಪತ್ತೆಯಾಗಿತ್ತು. ಶಂಕಿತ ಮಂಗನ ಕಾಯಿಲೆಗಾಗಿ 50 ಜನರ ರಕ್ತ ಪರೀಕ್ಷೆ ನಡೆಸ ಲಾಗಿದ್ದರೂ ಯಾರೊಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಈ ನಡುವೆ ಜಿಲ್ಲೆಯಲ್ಲಿ ಮಂಗನಕಾಯಿಲೆ ಜನಜಾಗೃತಿ ಕಾರ್ಯಕ್ರಮ ಮುಂದುವರಿದಿದ್ದು, ಇಂದು 2757 ಮನೆಗಳಿಗೆ ಆರೋಗ್ಯ ಕಾರ್ಯಕರ್ತೆ ಯರು ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ್ದು, ಕಳೆದ ಜ.9ರಿಂದ ಈವರೆಗೆ 1,17,766 ಮನೆಗಳಿಗೆ ಭೇಟಿ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.







